ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ: ಪ್ರಭಾಕರ್ ಭಟ್ ವಿರುದ್ಧ ಎಫ್‌ಐಆರ್ ದಾಖಲು

ಮಂಗಳೂರು, ಎ. 8: ಚುನಾವಣಾ ಆಯೋಗದ ಅನುಮತಿಯನ್ನು ಪಡೆಯದೆ ಸಭೆ ನಡೆಸಿ, ಧಾರ್ಮಿಕ ಭಾವನೆ ಕೆರಳಿಸಿದ ಆರೋಪದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪ್ರಭಾಕರ ಭಟ್ ಚುನಾವಣಾ ಆಯೋಗದ ಅನುಮತಿಯನ್ನು ಪಡೆಯದೆ ಕೈರಂಗಳದ ಸಭೆಯಲ್ಲಿ ಮಾತನಾಡಿ ದ್ದರು. ಸಭೆಯಲ್ಲಿ ಉದ್ರೇಕಕಾರಿ ಭಾಷಣ ಮಾಡಿ, ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದರು ಎಂದು ಆರೋಪಿಸಲಾಗಿತ್ತು. ಅವರ ಭಾಷಣದ ಮಧ್ಯೆ ನೀತಿ ಸಂಹಿತೆ ಜಾರಿಯಲ್ಲಿರುವ ಬಗ್ಗೆ ಸಭೆಯಲ್ಲಿದ್ದವರು ಹೇಳಿದಾಗ ‘‘ನೀತಿ ಸಂಹಿತೆಗೆ ಮಣ್ಣು ಹಾಕಿ, ಅದೊಂದು ನೀತಿ ಇಲ್ಲದ ಸಮಿತಿ’’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಾತ್ರವಲ್ಲದೆ ನೀತಿ ಸಂಹಿತೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್ ಅವರ ಈ ವಿವಾದಾತ್ಮಕ ಹೇಳಿಕೆಯಿಂದ ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಯ ಕುರಿತು ಸಾರ್ವಜನಿಕರಲ್ಲಿ ಗೊಂದಲ ಮತ್ತು ಅನುಮಾನವನ್ನು ಸೃಷ್ಟಿಸಿತ್ತು. ಇದೀಗ ಕೊಣಾಜೆ ಪೊಲೀಸರು ಅವರ ವಿರುದ್ಧ ಐಪಿಸಿ 153 ಎ ಮತ್ತು ಆರ್‌ಪಿ ಆ್ಯಕ್ಟ್ 125 ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.





