ಹೊಸ ಪಠ್ಯಕ್ರಮಕ್ಕೆ ಹೊಂದಿಕೊಂಡು ಹೋಗುವುದು ಅನಿವಾರ್ಯ, ಅಗತ್ಯವಾಗಿದೆ: ಗೀತಾ

ಶಿವಮೊಗ್ಗ, ಎ. 8: 'ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೊಸ ಪಠ್ಯಕ್ರಮಕ್ಕೆ ಹೊಂದಿ ಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗೀತಾರವರು ಅಭಿಪ್ರಾಯಪಟ್ಟರು.
ಅವರು ರವಿವಾರ ಬೆಳಗ್ಗೆ ನಗರದ ಕಲ್ಲಹಳ್ಳಿಯಲ್ಲಿರುವ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ನೂತನ ಪಠ್ಯಕ್ರಮಕ್ಕೊಂದು ಸುಲಭ ಪರಿಹಾರ ಕುರಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ಸುಧಾರಣೆಗಾಗಿ ಕಾಲಕಾಲಕ್ಕೆ ಪಠ್ಯಕ್ರಮ ಬದಲಾವಣೆ ಮಾಡಲಾಗುತ್ತದೆ. ಈ ವೇಳೆ ಒಂದಿಷ್ಟು ಗೊಂದಲವಾಗುವುದು ಸಹಜ. ಆದರೆ ಈ ಬಗ್ಗೆ ಮಾಹಿತಿ ಕಾರ್ಯಗಾರಗಳ ಮೂಲಕ ಶಿಕ್ಷಕರಿಗೆ ಪೋಷಕರಿಗೆ ಮತ್ತು ಮಕ್ಕಳಲ್ಲಿ ಅರಿವನ್ನು ಮೂಡಿಸಿದರೆ ಸರಿ ಹೋಗುತ್ತದೆ ಎಂದರು.
ಗಣಿತ ಮತ್ತು ವಿಜ್ಞಾನ ನ ವಿಷಯಗಳು ತುಂಬಾ ಕಠಿಣ ಎಂಬ ಕಲ್ಪನೆ ಇದೆ. ಆದರೆ ಮನಸಿಟ್ಟು ಓದಿದರೆ ಮತ್ತು ಶಿಕ್ಷಕರು ಉತ್ತಮ ವಾಗಿ ಸ್ಪಂದಿಸಿದರೆ ಕಷ್ಟವಾಗಲಾರದು ಎಂದರು.
ರಾಜ್ಯ ಸರ್ಕಾರ ಈ ಬಾರಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಎನ್ ಸಿ ಇ ಆರ್ ಟಿ ಪಠ್ಯಕ್ರಮವನ್ನು ಅಳವಡಿಸಲಿದೆ. ಪುಸ್ತಕ ರಚನಾ ಸಮಿತಿಯ ಮುಖ್ಯಸ್ಥರನ್ನು ಕರೆತಂದು ಹೀಗೆ ಉಚಿತವಾಗಿ ಕಾರ್ಯಗಾರ ಮಾಡುವುದು ಸ್ವಾಗತಾರ್ಹ ಸಂಗತಿಯಾಗಿದೆ. ಶಿಕ್ಷಣ ಇಲಾಖೆ ಮಾಡುವ ಕೆಲಸವಿದು ಎಂದ ಅವರು, ಮುಂದಿನ ದಿನಗಳಲ್ಲಿ ಇಲಾಖೆ ಸಹ ಇಂತಹ ಕಾರ್ಯಗಾರ ಹಮ್ಮಿ ಕೊಳ್ಳುತ್ತೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್ ರವರು, ಈ ಹಿಂದಿನಿಂದಲೂ ನಮ್ಮ ಶಾಲೆವತಿಯಿಂದ ಶೈಕ್ಷಣಿಕ ಕಾರ್ಯಗಾರಗಳನ್ನು ಉಚಿತವಾಗಿ ನಡೆಸಿಕೊಂಡು ಬಂದಿದೆ. ತಜ್ಞರನ್ನು ಆಹ್ವಾನಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯ ಮಾಡಿಕೊಂಡು ಬಂದಿದೆ ಎಂದರು.
ಶಿಕ್ಷಣದಿಂದಲೇ ದೇಶದ ಪ್ರಗತಿ ಸಾಧ್ಯ. ಕಾಲಕಾಲಕ್ಕೆ ಅನುಗುಣವಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲಿಯೂ ಬದಲಾವಣೆಯಾಗಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ. ಈ ಬದಲಾವಣೆಗೆ ಶಿಕ್ಷಕರು, ವಿದ್ಯಾರ್ಥಿಗಳು ಹೊಂದಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.
ಗಣಿತ ಪಠ್ಯಪುಸ್ತಕ ರಚನಾ ಸಮಿತಿ ಮುಖ್ಯಸ್ಥ ಟಿ ಕೆ ಪ್ರಸನ್ನ ಮೂರ್ತಿ ಮತ್ತು ವಿಜ್ಞಾನ ಪಠ್ಯಪುಸ್ತಕ ಸಮಿತಿ ಮುಖ್ಯಸ್ಥ ರಾಮಚಂದ್ರ ಭಟ್ ಕಾರ್ಯಗಾರದಲ್ಲಿ ಭಾಗವಹಿಸಿ ಪ್ರಾತ್ಯಕ್ಷತೆ ಮೂಲಕ ಮಕ್ಕಳು ಪೋಷಕರು ಮತ್ತು ಶಿಕ್ಷಕರಿಗೆ ಹೊಸ ಪಠ್ಯಪುಸ್ತಕ ಗಳ ಬಗ್ಗೆ ಮಾಹಿತಿ ನೀಡಿದರು.
ಜಯಣ್ಣಗೌಡ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.







