ಅರುಣಾಚಲದಲ್ಲಿ ಭಾರತದ ‘ಅತಿಕ್ರಮಣ’ : ಚೀನಾ ಆಕ್ಷೇಪ ತಳ್ಳಿಹಾಕಿದ ಭಾರತ

ಇಟಾನಗರ, ಎ.8: ‘ವಿವಾದಾಸ್ಪದ ಪ್ರದೇಶ’ವಾಗಿರುವ ಅರುಣಾಚಲ ಪ್ರದೇಶದ ಗಡಿಭಾಗದ ಅಸಾಫಿಲ ಪ್ರದೇಶದಲ್ಲಿ ಭಾರತೀಯ ಸೇನೆ ಅತಿಕ್ರಮಣ ಪ್ರವೇಶ ಮಾಡಿದೆ ಎಂದು ಚೀನಾ ಕಳೆದ ತಿಂಗಳು ಭಾರತಕ್ಕೆ ಬಲವಾದ ಪ್ರತಿಭಟನೆ ಸಲ್ಲಿಸಿದೆ . ಆದರೆ ಭಾರತ ಈ ಆಕ್ಷೇಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ 15ರಂದು ಅರುಣಾಚಲಪ್ರದೇಶದ ಕಿಬಿತು ಎಂಬಲ್ಲಿ ನಡೆದಿದ್ದ ಗಡಿ ಯೋಧರ ಸಭೆಯಲ್ಲಿ ಚೀನಾದ ಪಡೆ ಈ ಆಕ್ಷೇಪ ಎತ್ತಿದಾಗ ಭಾರತದ ಪಡೆ ಇದನ್ನು ನಿರಾಕರಿಸಿದೆ. ಅಲ್ಲದೆ ಅರುಣಾಚಲದ ಮೇಲಿನ ಸುಬಾಂಸಿರಿ ಪ್ರದೇಶದ ಈ ಭಾಗ ಭಾರತಕ್ಕೆ ಸೇರಿದ್ದು, ಮತ್ತು ಇಲ್ಲಿ ಭಾರತದ ಪಡೆಗಳು ನಿಯಮಿತವಾಗಿ ಗಸ್ತುಕಾರ್ಯ ನಡೆಸುತ್ತಿದೆ ಎಂದು ಭಾರತದ ಪಡೆ ಸ್ಪಷ್ಟಪಡಿಸಿದೆ. ಅಸಾಫಿಲದಲ್ಲಿ ಭಾರತದ ಪಡೆ ನಡೆಸುತ್ತಿರುವ ಗಸ್ತುಕಾರ್ಯಕ್ಕೆ ಚೀನಾ ಆಕ್ಷೇಪಿಸಿರುವುದು ಅಚ್ಚರಿ ತಂದಿದೆ . ಈ ಹಿಂದೆ ಇಲ್ಲಿ ಹಲವು ಬಾರಿ ಚೀನಾದ ಪಡೆಗಳು ಅತಿಕ್ರಮಣ ನಡೆಸಿರುವುದನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ ಎಂದು ಭಾರತದ ಪಡೆಗಳು ತಿಳಿಸಿವೆ.
ಚೀನಾ ಸೇನಾ ಪಡೆಯ ನಿಯೋಗವು ಸಭೆಯಲ್ಲಿ ಅಸಾಫಿಲ ಪ್ರದೇಶದಲ್ಲಿ ಕಳೆದ ಡಿಸೆಂಬರ್ 21,22 ಹಾಗೂ 23ರಂದು ಭಾರತದ ಸೇನಾಪಡೆಯ ಗಸ್ತುಕಾರ್ಯದ ಬಗ್ಗೆ ನಿರ್ದಿಷ್ಟವಾಗಿ ಪ್ರಸ್ತಾಪಿಸಿದೆ. ಈ ರೀತಿಯ ‘ಅತಿಕ್ರಮಣದ ಘಟನೆ’ ಉಭಯ ದೇಶಗಳ ಮಧ್ಯೆ ಪ್ರಕ್ಷುಬ್ಧತೆಯನ್ನು ಹೆಚ್ಚಿಸಲಿದೆ ಎಂದು ಚೀನಾ ನಿಯೋಗ ಆಕ್ಷೇಪಿಸಿದೆ. ಅಲ್ಲದೆ ಕಳೆದ ಡಿಸೆಂಬರ್‌ನಲ್ಲಿ ಟ್ಯುಟಿಂಗ್ ಎಂಬಲ್ಲಿ ಚೀನಾದ ರಸ್ತೆ ನಿರ್ಮಾಣ ತಂಡವು ರಸ್ತೆ ನಿರ್ಮಿಸುತ್ತಿರುವುದನ್ನು ಭಾರತದ ಸೇನೆ ಆಕ್ಷೇಪಿಸಿದಾಗ ಚೀನಾದ ತಂಡ ಅಲ್ಲಿಂದ ತೆರಳಿತ್ತು. ಆಗ ಭಾರತದ ಪಡೆಗಳು ಚೀನಾದ ರಸ್ತೆ ನಿರ್ಮಾಣ ಸಾಮಗ್ರಿಗಳಿಗೆ ಹಾನಿ ಎಸಗಿವೆ ಎಂದೂ ಚೀನಾ ದೂರಿದೆ.
ಆದರೆ ಇದನ್ನು ನಿರಾಕರಿಸಿದ ಭಾರತ, ಟ್ಯುಟಿಂಗ್ ಪ್ರದೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಿಂದ ಒಂದು ಕಿ.ಮೀ.ನಷ್ಟು ಒಳಗಡೆ ಭಾರತದ ವ್ಯಾಪ್ತಿಗೆ ಪ್ರವೇಶಿಸಿ ಚೀನಾದ ಪಡೆ ರಸ್ತೆ ನಿರ್ಮಿಸುತ್ತಿತ್ತು. ಇದನ್ನು ಭಾರತದ ಪಡೆ ತಡೆದಾಗ ಚೀನಾದ ತಂಡ ವಾಪಸ್ ತೆರಳಿದೆ. ಆ ಸಂದರ್ಭ ಅವರು ಅಲ್ಲೇ ಬಿಟ್ಟುಹೋಗಿದ್ದ ಎರಡು ಯಂತ್ರಗಳನ್ನು ಭಾರತದ ಪಡೆ ವಶಕ್ಕೆ ಪಡೆದಿದ್ದು ಬಳಿಕ ಅವರಿಗೆ ವಾಪಾಸು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಡೋಕಾ ಲಾ ಬಿಕ್ಕಟ್ಟು ಪ್ರಕರಣದ ಬಳಿಕ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಭಾರತದ ಪಡೆಗಳು ಸಮರಾಭ್ಯಾಸ ಕವಾಯತು ಹೆಚ್ಚಿಸಿದೆ. ಯಾವುದೇ ಪರಿಸಿತ್ಥಿಯನ್ನು ಎದುರಿಸಲು ನಾವು ಸಂಪೂರ್ಣ ಸನ್ನದ್ಧರಾಗಿದ್ದೇವೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ವ್ಯೂಹಾತ್ಮಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಟಿಬೆಟ್ ವಲಯದಲ್ಲಿ ಹಾಗೂ ಗಡಿಭಾಗದ ಬಳಿ ಚೀನಾದ ಪಡೆಗಳು ನಡೆಸುತ್ತಿರುವ ಚಟುವಟಿಕೆಯನ್ನು ಗಮನಿಸಲು ಈ ಪ್ರದೇಶದಲ್ಲಿ ಭಾರತ ಕಣ್ಗಾವಲು ವ್ಯವಸ್ಥೆಯನ್ನೂ ಬಿಗಿಗೊಳಿಸಿದೆ. ಪಾಕಿಸ್ತಾನದ ಗಡಿಭಾಗಕ್ಕೆ ಕೇಂದ್ರೀಕೃತವಾಗಿದ್ದ ತನ್ನ ಗಮನವನ್ನು ಚೀನಾದ ಗಡಿ ಭಾಗಕ್ಕೆ ವರ್ಗಾಯಿಸುವ ಸಮಯ ಇದೀಗ ಬಂದಿದೆ ಎಂದು ಕಳೆದ ಜನವರಿಯಲ್ಲಿ ಸೇನಾಪಡೆಯ ಮುಖ್ಯಸ್ಥ ಜ ಬಿಪಿನ್ ರಾವತ್ ನೀಡಿರುವ ಹೇಳಿಕೆ, ಈ ಪ್ರದೇಶದಲ್ಲಿ ನೆಲೆಸಿರುವ ಗಂಭೀರ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಗಡಿ ಯೋಧರ ಸಭೆ
ಅರುಣಾಚಲ ಪ್ರದೇಶದ ಭಾಗದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಕುರಿತು ಉಭಯ ದೇಶಗಳು ಭಿನ್ನವಾದ ಗ್ರಹಿಕೆ ಹೊಂದಿದ್ದು, ಇಲ್ಲಿ ಅತಿಕ್ರಮಣದ ಘಟನೆಗಳು ನಡೆದಲ್ಲಿ ಗಡಿ ಯೋಧರ ಸಭೆ(ಬಿಪಿಎಂ)ಯಲ್ಲಿ ಆಕ್ಷೇಪ ದಾಖಲಿಸಬಹುದಾಗಿದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಐದು ಕಡೆ ಬಿಪಿಎಂ ಕೇಂದ್ರಗಳಿವೆ. ಅರುಣಾಚಲ ಪ್ರದೇಶದ ಬೂಮ್ ಲಾ ಮತ್ತು ಕಿಬಿತು, ಲಡಾಕ್‌ನ ದೌಲತ್ ಬೇಗ್ ಓಲ್ಡಿ ಮತ್ತು ಚುಸುಲ್, ಸಿಕ್ಕಿಂನ ನಾಥು ಲ - ಈ ಐದು ಕಡೆ ಬಿಪಿಎಂ ಕೇಂದ್ರಗಳಿವೆ. ಕಳೆದ ಮಾರ್ಚ್ 15ರಂದು ಕಿಬಿತು ಪ್ರದೇಶದಲ್ಲಿ ಚೀನಾದ ವ್ಯಾಪ್ತಿಯಲ್ಲಿರುವ ದಾಯ್‌ಮೈ ಸೇನಾ ನೆಲೆಯಲ್ಲಿ ಈ ಸಭೆ ನಡೆದಿದೆ.







