ವ್ಯಾಘ್ರನ ಸೆರೆಗೆ ಮುಂದಾದ ಅರಣ್ಯ ಇಲಾಖೆ : 4 ಆನೆ,17 ಕ್ಯಾಮೆರಾ, 46 ಸಿಬ್ಬಂದಿ ಬಳಕೆ

ಮಡಿಕೇರಿ,ಎ.8 :ದ.ಕೊಡಗಿನ ವಿವಿಧ ಭಾಗದಲ್ಲಿ ಕಳೆದ ಎರಡು ತಿಂಗಳಿನಿಂದ ಹುಲಿ ಹಾವಳಿ ಮಿತಿಮೀರಿದ್ದು ರೈತನ 15ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗುತ್ತಿರುವುದನ್ನು ಮನಗಂಡ ಅರಣ್ಯ ಇಲಾಖೆಯು ವ್ಯಾಘ್ರನ ಸೆರೆಗೆ ಪ್ರಯತ್ನ ನಡೆಸಿದೆ. ಮುಂಜಾನೆ 5 ಗಂಟೆಗೆ ಕೊಟ್ಟಗೇರಿಯ ಮಾಪಂಗಡ ಮುದ್ದಯ್ಯನವರ ಮನೆ ಸಮೀಪವಿರುವ ದೇವರಕಾಡು ಅರಣ್ಯ ಹಾಗೂ ಸಮೀಪದ ಕುರುಚಲು ಕಾಡು ಹಾಗೂ ಕಾಫಿ ತೋಟಗಳಲ್ಲಿ ಇಲಾಖೆಯ ಸಿಬ್ಬಂದಿಗಳು 4 ಆನೆಗಳ ಸಹಾಯದಿಂದ ಕೂಬಿಂಗ್ ನಡೆಸಿದ್ದು ಹುಲಿಯ ಸೆರೆಗೆ ಪ್ರಯತ್ನ ನಡೆಸಿದರು.
ಮರದ ಮೇಲೆ 11 ಸಿಬ್ಬಂದಿಗಳು ಹುಲಿಯ ಸಂಚಾರದ ಬಗ್ಗೆ ನಿಗಾ ವಹಿಸಿದ್ದರು. ಸುತ್ತಮುತ್ತಲಿನಲ್ಲಿ 17 ಕ್ಯಾಮೆರಾಗಳನ್ನು ಅಳವಡಿಸಿದ್ದ ಅರಣ್ಯ ಅಧಿಕಾರಿಗಳು ಹುಲಿಯ ಚಲನ ವಲನದ ಬಗ್ಗೆ ಕ್ಯಾಮೆರಾದಿಂದ ಸೆರೆಸಿಕ್ಕ ಹುಲಿಯ ಓಡಾಟವನ್ನು ಗಮನಿಸಿ ಈ ಭಾಗದಲ್ಲಿ ಬೆಳಗಿನಿಂದಲೇ ಮತ್ತಿಗೋಡುವಿನ ಆನೆ ಕ್ಯಾಂಪ್‍ನಲ್ಲಿದ್ದ ಸಾಕಾನೆಗಳಾದ ಅಭಿಮನ್ಯು, ಕೃಷ್ಣ, ದ್ರೋಣ, ಹಾಗೂ ಭೀಮನ ಸಹಾಯ ಪಡೆದು ತೋಟ ಹಾಗೂ ಕಾಡಿನಲ್ಲಿ ಸಂಚಾರ ನಡೆಸಿ ಹುಲಿ ಸೆರೆಗೆ ಪ್ರಯತ್ನ ಮಾಡಿದರು. ಅರಣ್ಯ ಇಲಾಖಾ ಹಿರಿಯ ಅಧಿಕಾರಿಗಳು,ಸಿಬ್ಬಂದಿಗಳು ಹಾಗೂ ಗ್ರಾಮದ ಸಾರ್ವಜನಿಕರು ಹುಲಿ ಹಿಡಿಯುವ ಕಾರ್ಯಚರಣೆಯಲ್ಲಿ ಮುಂದಾಗಿದ್ದರು ಬೆಳಿಗ್ಗೆ 10 ಗಂಟೆಯ ವರೆಗೆ ಸತತವಾಗಿ ಕಾರ್ಯಚರಣೆ ನಡೆಸಿದರಾದರೂ ಹುಲಿಯ ಜಾಡು ಮಾತ್ರ ಅಧಿಕಾರಿಗಳಿಗೆ ಸಿಗಲೇ ಇಲ್ಲ.
ಕೊಟ್ಟಗೇರಿಯ ಮಾಪಂಗಡ ಮುದ್ದಯ್ಯನವರ ಕೊಟ್ಟಿಗೆಯಲ್ಲಿದ್ದ 3 ಹಸುಗಳನ್ನು ಕೆಲವು ದಿನಗಳ ಹಿಂದೆ ಹುಲಿಯು ತಿಂದು ಹಾಕಿತ್ತು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಭಾಗದಲ್ಲಿ ಹುಲಿ ಸೆರೆಗೆ ಬೋನ್‍ಅನ್ನು ಇಟ್ಟು ಪ್ರಯತ್ನ ನಡೆಸಿದ್ದರು. ಆದರೆ ಹುಲಿ ಬೋನಿನತ್ತ ಸುಳಿಯುತ್ತಿರಲಿಲ್ಲ. ರೈತ ಸಂಘ ಹಾಗೂ ಜೆಡಿಎಸ್ ಪಕ್ಷದ ಮುಖಂಡರುಗಳು ಹುಲಿ ಸೆರೆಗೆ ಅರಣ್ಯ ಇಲಾಖಾ ಅಧಿಕಾರಿಗಳ ಮೇಲೆ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಮುಂಜಾನೆಯಿಂದಲೇ ಕೂಬಿಂಗ್ ಕಾರ್ಯಾಚರಣೆ ನಡೆಸಿದ್ದರು.ನಾಗರಹೊಳೆ,ತಿತಿಮತಿ,ಭಾಗದ ಅರಣ್ಯ ಅಧಿಕಾರಿಗಳು,ಸಿಬ್ಬಂದಿಗಳು,ರ್ಯಾಪಿಡ್ ಪೋರ್ಸ್ ಸ್ಥಳದಲ್ಲಿ ಮೊಖಂ ಹೂಡಿದ್ದು ಹುಲಿ ಸೆರೆಗೆ ಪ್ರಯತ್ನ ನಡೆಸಿದ್ದಾರೆ.ಕಾರ್ಯಚರಣೆಯಲ್ಲಿ ಡಿಎಫ್‍ಓ ಕೃಷ್ಣರಾಜ್,ಎಸಿಎಫ್ ಪೌಲ್ ಆ್ಯಂಟೋನಿ,ಆರ್.ಎಫ್.ಓ. ಗಂಗಾಧರ್,ಕಿರಣ್, ಅಶೋಕ್ ಹುನುಗುಂದ,ಸ್ನೇಕ್ ಸತೀಶ್, ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.
ರೈತರ, ಬೆಳೆಗಾರರ ಹಸುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದ ಹುಲಿಯನ್ನು ಹಿಡಿಯುವಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಒತ್ತಾಯ ಮಾಡಿದ್ದ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮೇರೀಯಂಡ ಸಂಕೇತ್ ಪೂವಯ್ಯ ಇಂದು ಮುಂಜಾನೆ 6 ಗಂಟೆಗೆ ಕೊಟ್ಟಗೇರಿಯಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು. ಆಧುನಿಕ ತಂತ್ರಜ್ಞಾನವನ್ನು ಬಳಸುವಂತೆ ಹಸು ಕಳೆದುಕೊಂಡ ರೈತನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಲು ಮೇಲಾಧಿಕಾರಿಗಳೊಂದಿಗೆ ತುರ್ತು ಮಾತುಕತೆ ನಡೆಸಿ ಇಲ್ಲಿನ ನೈಜ್ಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಂತೆ ಸ್ಥಳದಲ್ಲಿದ್ದ ವಲಯ ಅಧಿಕಾರಿ ಶ್ರೀಪತಿ ಹಾಗೂ ಡಿಸಿಎಫ್ ಮರಿಯ ಕೃಷ್ಣರಾಜ್‍ರವರಿಗೆ ಮನವಿ ಮಾಡಿದರು.
ಈ ಭಾಗದಲ್ಲಿ 4 ಎಕರೆ ಜಾಗದಲ್ಲಿ ಹುಲಿ ಸಂಚಾರ ವಿರುವುದು ಗಮನಕ್ಕೆ ಬಂದಿದೆ. ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.ಎಸ್‍ಟಿಪಿಎಫ್‍ನಿಂದ 8ಜನ,ಕಲ್ಲಳ,ಆನೆಚೌಕೂರು, ರೇಂಜ್‍ನಿಂದ 4 ಆನೆಗಳನ್ನು ಬಳಕೆ ಮಾಡಿದ್ದೇವೆ.ಈ ಭಾಗದಲ್ಲೇ ಹುಲಿ ಸಂಚಾರವಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಮೀಪದ ತೋಟಗಳಲ್ಲಿ ಕ್ಯಾಮೆರಾ ಅಳವಡಿಸಿ ಹುಲಿ ಸಂಚಾರದ ಮಾಹಿತಿ ಸಂಗ್ರಹಿಸಿದ್ದೇವೆ. ಬೋನಿನಲ್ಲಿ ಮೇಕೆಯನ್ನಿಟ್ಟು ಹುಲಿಯನ್ನ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದೇವೆ.ಇಲ್ಲಿಯೂ ಕೂಡ ವಿಫಲವಾದ ಕಾರಣ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಮೇಲಾಧಿಕಾರಿಗಳ ಅನುಮತಿ ಪಡೆದು ಹುಲಿ ಸೆರೆ ಹಿಡಿಯುವ ಕಾರ್ಯಚರಣೆಗೆ ಮುಂದಾಗಿದ್ದೇವೆ. ಹುಲಿಯನ್ನು ಹಿಡಿಯುವ ಮೂಲಕ ನಾಗರೀಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತೇವೆ.
ಶ್ರೀಪತಿ, ಎಸಿಎಫ್ ತಿತಿಮತಿ ವಲಯ
ಅರಣ್ಯದಿಂದ ಬೇರ್ಪಟ್ಟ ಹುಲಿಯು ಈ ಭಾಗದಲ್ಲಿ ಸಂಚರಿಸುತ್ತಿದ್ದು ಹುಲಿಯು ಕಾಡು ಹಂದಿಯನ್ನು ಈ ಭಾಗದಲ್ಲಿ ತಿಂದು ಹಾಕಿರುವುದು ಬೆಳಕಿಗೆ ಬಂದಿದೆ. ನಂತರ ಸುತ್ತಮುತ್ತಲಿನ ರೈತರ ಕೊಟ್ಟಿಗೆಗೆ ಧಾಳಿ ಮಾಡಿ ಅಲ್ಲಿರುವ ಹಸುವನ್ನು ತಿಂದು ಹಾಕುತ್ತಿದೆ. ಮತ್ತೆ ಇದು ಕಾಡಿನತ್ತ ಸಂಚರಿಸುವುದು ಅನುಮಾನವಿದೆ.
ಕುಂಞಂಗಡ ಬೋಸ್ ಮಾದಪ್ಪ, ವಾರ್ಡನ್ ನಾಗರಹೊಳೆ ಅರಣ್ಯ
ಇಲಾಖೆಯ ಸ್ಪಷ್ಟ ಆದೇಶದಂತೆ ಹುಲಿ ಸೆರೆ ಹಿಡಿಯಬೇಕು ಸಂಜೆ 6 ಗಂಟೆಯ ನಂತರ ಹುಲಿಯ ಮೇಲೆ ಚುಚ್ಚುಮದ್ದು ಪ್ರಯೋಗ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮುಂಜಾನೆಯಿಂದಲೇ ಆನೆಯ ಸಹಾಯದಿಂದ ಕಾಡಿನಲ್ಲಿ ಸಂಚಾರ ನಡೆಸಿ ಹುಲಿ ಸೆರೆಗೆ ಪ್ರಯತ್ನ ಮಾಡಿದ್ದೇವೆ. ಆದರೆ ಹುಲಿ ಸದ್ಯಕ್ಕೆ ಪತ್ತೆ ಆಗಲಿಲ್ಲ.
ಡಾ.ಮಜೀದ್, ಅರವಳಿಕೆ ತಜ್ಞರು,ನಾಗರಹೊಳೆ ಅರಣ್ಯ







