ಮಹಿಳಾ ವಿಜ್ಞಾನಿಗಳು ಲೈಂಗಿಕ ಕಿರುಕುಳಕ್ಕೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು:ಅಭಿಪ್ರಾಯ

ಹೊಸದಿಲ್ಲಿ,ಎ.8: ಭಾರತದ ಪ್ರಯೋಗಶಾಲೆಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಹಿಳಾ ವಿಜ್ಞಾನಿಗಳಿದ್ದಾರೆ ಮತ್ತು ಅವರ ಮೇಲಿನ ಹುದ್ದೆಗಳಲ್ಲಿರುವ ಮಹಿಳೆಯರ ಸಂಖ್ಯೆ ಇನ್ನೂ ಕಡಿಮೆ. ಹೀಗಾಗಿ ಅಧಿಕಾರದ ಪ್ರಭಾವದಡಿ ಗಾಜಿನ ತೆರೆಗಳ ಹಿಂದಿರುವ ಈ ಕ್ಷೇತ್ರವು ಲೈಂಗಿಕ ಕಿರುಕುಳದ ಘಟನೆಗಳಿಗೆ ಸುಲಭಭೇದ್ಯವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇಲ್ಲಿಯ ಜೆಎನ್‌ಯುದ ಸ್ಕೂಲ್ ಆಫ್ ಲೈಫ್ ಸೈನ್ಸ್‌ಸ್‌ನ ಪ್ರೊಫೆಸರ್‌ವೋರ್ವರ ವಿರುದ್ಧ ಇತ್ತೀಚಿಗೆ ಕೇಳಿ ಬಂದ ಲೈಂಗಿಕ ಕಿರುಕುಳದ ಆರೋಪಗಳಿಂದಾಗಿ ದೇಶದ ವಿಜ್ಞಾನ ಪ್ರಯೋಗಶಾಲೆಗಳಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿಯು ವ್ಯಾಪಕ ಚರ್ಚೆಗೆ ಗುರಿಯಾಗಿದೆ.
ಈ ಕ್ಷೇತ್ರದಲ್ಲಿ ಲೈಂಗಿಕ ಅತಿಕ್ರಮಣಗಳು ಇತರ ಕ್ಷೇತ್ರಗಳಿಗಿಂತ ಭಿನ್ನವಾಗಿಲ್ಲವಾದರೂ ಸಂಶೋಧನಾ ವಿಭಾಗದ ಮುಖ್ಯ ಸ್ಥರಗಳಲ್ಲಿರುವರ ಅಧಿಕಾರ, ಲಿಂಗ ಅಸಮಾನತೆ, ಸೂಪರ್‌ವೈಸರ್ ಮತ್ತು ವಿದ್ಯಾರ್ಥಿಗಳ ನಡುವಿನ ನಿಕಟ ಸಂಬಂಧ ಮತ್ತು ಕೆಲಸದ ದೀರ್ಘಾವಧಿ ಇವು ಈ ಕ್ಷೇತ್ರವನ್ನು ಇಂತಹ ಲೈಂಗಿಕ ಕಿರುಕುಳಗಳಿಗೆ ವಿಶೇಷವಾಗಿ ಪಕ್ಕಾಗುವಂತೆ ಮಾಡಿವೆ ಎಂದು ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ(ಐಐಎಸ್‌ಇಆರ್)ಯ ಅರ್ನಾಬ್ ಘೋಷ್ ತಿಳಿಸಿದರು.
ವಿಜ್ಞಾನ ಕ್ಷೇತ್ರದಲ್ಲಿ ಲೈಂಗಿಕ ಕಿರುಕುಳಗಳ ಬಗ್ಗೆ ಯಾವುದೇ ಅಂಕಿಅಂಶ ಲಭ್ಯವಿಲ್ಲ. ಆದರೆ ಅಂತಹ ಪ್ರಕರಣಗಳು ಹೆಚ್ಚಿರುವ ಸಾಧ್ಯತೆಗಳಿವೆ ಎಂದರು.
ವಿದ್ಯಾರ್ಥಿ/ವಿದ್ಯಾರ್ಥಿನಿಯ ಶೈಕ್ಷಣಿಕ ಪ್ರಗತಿ ಮತ್ತು ಭವಿಷ್ಯದ ಉದ್ಯೋಗಕ್ಕಾಗಿ ಶಿಫಾರಸುಗಳಂತಹ ಇತರ ವಿಷಯಗಳಲ್ಲಿ ಅವರ ಮೇಲೆ ಮೇಲ್ವಿಚಾರಕರು ಹೆಚ್ಚಿನ ಅಧಿಕಾರನ್ನು ಚಲಾಯಿಸುತ್ತಾರೆ. ಪ್ರಾಯೋಗಿಕ ವಿಜ್ಞಾನದಲ್ಲಿ ಅವರು ಇನ್ನಷ್ಟು ಹೆಚ್ಚಿನ ಅಧಿಕಾರವನ್ನು ಹೊಂದಿರುತ್ತಾರೆ. ಇವೆಲ್ಲ ದಬ್ಬಾಳಿಕೆಗೆ ಮತ್ತು ಕೆಲವೊಮ್ಮೆ ಲೈಂಗಿಕ ಕಿರುಕುಳಗಳಿಗೂ ದಾರಿಯಾಗುತ್ತವೆ ಎಂದು ಜೆಎನ್‌ಯುದ ನಿವೃತ್ತ ಪ್ರೊಫೆಸರ್ ಸುಧಾ ಭಟ್ಟಾಚಾರ್ಯ ಹೇಳಿದರು.
‘‘ಸಮಾಜದ ಧೋರಣೆಗಳು ಇದಕ್ಕೆ ಕಾರಣವಾಗಿದೆಯೆಂದು ದೂರಿದ ಅವರು, ಉದಯೋನ್ಮುಖ ಮಹಿಳಾ ವಿಜ್ಞಾನಿಗಳಿಗೆ ಸ್ವಾತಂತ್ರ ಮತ್ತು ಅವರು ಸಂಶೋಧನೆಗೆ ತಮ್ಮನ್ನು ಸಂಂಪೂರ್ಣವಾಗಿ ಅರ್ಪಿಸಿಕೊಳ್ಳಲು ಅವಕಾಶವನ್ನು ನೀಡಲು ಸಾಮಾಜಿಕ ದೃಷ್ಟಿಕೋನಗಳಲ್ಲಿ ಇಂದಿಗೂ ಅಗತ್ಯ ಬದಲಾವಣೆಗಳಾಗಿಲ್ಲ ಎಂಬ ನೋವು ಅತ್ಯಂತ ಹಿರಿಯ ಮಹಿಳಾ ವಿಜ್ಞಾನಿಯಾಗಿ ನನ್ನನ್ನು ಕಾಡುತ್ತಿದೆ ’’ಎಂದರು.







