ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗದ ಕ್ರೈಸ್ತ ವಿವಾಹ ಕಾಯ್ದೆ ತಿದ್ದುಪಡಿ

ಹೊಸದಿಲ್ಲಿ, ಎ.8: 149 ವರ್ಷಗಳಷ್ಟು ಹಳೆಯ ಕ್ರೈಸ್ತ ವಿವಾಹ ಕಾಯ್ದೆಗೆ ತರಲು ಉದ್ದೇಶಿಸಲಾಗಿರುವ ತಿದ್ದುಪಡಿಗೆ ಸಂಬಂಧಪಟ್ಟ ಮಸೂದೆಯನ್ನು ಇತ್ತೀಚೆಗೆ ಕೊನೆಗೊಂಡ ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ಜಾರಿಗೆ ತರಲು ಸಾಧ್ಯವಾಗಿಲ್ಲ ಎಂದು ಸರಕಾರ ತಿಳಿಸಿದೆ.
ಪರಸ್ಪರ ಸಹಮತದಿಂದ ವಿಚ್ಛೇದನ ಪಡೆಯಲು ಮುಂದಾಗುವ ಕ್ರೈಸ್ತ ದಂಪತಿಯು ಪ್ರತ್ಯೇಕಗೊಳ್ಳಲು ವಿಧಿಸಲಾಗಿದ್ದ ಕಡ್ಡಾಯ ಎರಡು ವರ್ಷಗಳ ಅವಧಿಯನ್ನು ಅರ್ಧಕ್ಕೆ ಇಳಿಸಿ ಒಂದು ವರ್ಷ ಮಾಡುವ ಪ್ರಸ್ತಾವಕ್ಕೆ 24 ರಾಜ್ಯಗಳು ಸಹಮತ ಸೂಚಿಸಿದ್ದವು.
ಸುಪ್ರೀಂ ಕೋರ್ಟ್ ಆದೇಶ ಮತ್ತು ಕ್ರೈಸ್ತ ಸಮುದಾಯದ ಬೇಡಿಕೆಯನ್ನು ಗಮನದಲ್ಲಿಟ್ಟು, ಎರಡು ವರ್ಷಗಳಿಂದ ಪ್ರತ್ಯೇಕವಾಗಿ ಜೀವಿಸುತ್ತಿರುವ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು ಎಂಬ 1869ರ ಕಾಯ್ದೆಯ ಸೆಕ್ಷನ್ 10ಎ ಗೆ ತಿದ್ದುಪಡಿ ತಂದು ಇತರ ವೈಯಕ್ತಿಯ ಕಾನೂನುಗಳ ಜೊತೆ ಸಮಾನತೆ ತರಲು ಕೇಂದ್ರ ಸರಕಾರ ಬಯಸಿದೆ. ಕ್ರೈಸ್ತ ವಿವಾಹ ಕಾಯ್ದೆಗೆ ತಿದ್ದುಪಡಿ ತರಲು ನಾವು ಬಯಸಿದ್ದೇವೆ. ಆದರೆ ಈ ಬಗ್ಗೆ ರಾಜ್ಯಗಳ ಸಲಹೆಗಳನ್ನು ಪಡೆಯಬೇಕಿದ್ದ ಕಾರಣ ಸಂಪುಟದ ಮುಂದೆ ಇಡಲು ಸಾಧ್ಯವಾಗಿಲ್ಲ. ಸಂಸತ್‌ನ ಮುಂದಿನ ಅಧಿವೇಶನದಲ್ಲಿ ಈ ಮಸೂದೆಯನ್ನು ಸಂಪುಟದ ಮುಂದೆ ಇಡಲಾಗುವುದು. ವೈವಾಹಿಕ ಕಾನೂನು ಹಾಗೂ ಇದೇ ರೀತಿಯ ಇತರ ಕಾನೂನುಗಳಲ್ಲಿ ತಿದ್ದುಪಡಿ ತರಲು ಸಮಯ ಹಿಡಿಯುತ್ತದೆ ಎಂದು ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂದೂ ವಿವಾಹ ಕಾಯ್ದೆ, ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆ ಹಾಗು ವಿಶೇಷ ವಿವಾಹ ಕಾಯ್ದೆಯಡಿ ದಂಪತಿ ಪ್ರತ್ಯೇಕಗೊಳ್ಳಲು ಒಂದು ವರ್ಷದ ಅವಧಿಯನ್ನು ನೀಡಲಾಗಿದೆ. ಆದರೆ ಕ್ರೈಸ್ತ ವಿವಾಹ ಕಾಯ್ದೆಯಲ್ಲಿ ಈ ಅವಧಿಯನ್ನು ಎರಡು ವರ್ಷಕ್ಕೆ ನಿಗದಿಪಡಿಸಲಾಗಿದೆ. ಸದ್ಯದ ಕಾನೂನಿಗೆ ತಿದ್ದುಪಡಿ ತಂದು ಕ್ರೈಸ್ತ ದಂಪತಿಗೂ ಪ್ರತ್ಯೇಕಗೊಳ್ಳಲು ಒಂದು ವರ್ಷದ ಅವಧಿಯನ್ನು ನಿಗದಿಪಡಿಸುವಂತೆ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಉಳಿದ ವೈವಾಹಿಕ ಕಾನೂನುಗಳಲ್ಲಿ ಈ ಅವಧಿ ಒಂದು ವರ್ಷವಾಗಿರುವಾಗ ಕ್ರೈಸ್ತರಿಗೆ ಮಾತ್ರ ಯಾಕೆ ವಿಚ್ಛೇದನ ನೀಡಲು ಎರಡು ವರ್ಷದ ಅವಧಿಯನ್ನು ನೀಡಲಾಗಿದೆ? ಎಂದು ನ್ಯಾಯಾಧೀಶ ವಿಕ್ರಮ್‌ಜಿತ್ ಸೇನ್ ಹಾಗೂ ಎ.ಎಂ ಸಪ್ರೆ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಪ್ರಶ್ನಿಸಿತ್ತು.







