ಬ್ರೈನ್ ಡೆಡ್: ಪ್ರಮಾಣೀಕರಣಕ್ಕೆ ಮಾರ್ಗಸೂಚಿ
ದೇಶದಲ್ಲೇ ಮೊದಲ ರಾಜ್ಯ ಕೇರಳ

ಸಾಂದರ್ಭಿಕ ಚಿತ್ರ
ತಿರುವನಂತಪುರ, ಎ. 8: ಮೆದುಳು ಸತ್ತ ಪ್ರಕರಣಗಳನ್ನು ನಿರ್ಧರಿಸಲು ಗುಣಮಟ್ಟ ನಿರ್ವಹಣಾ ಪ್ರಕ್ರಿಯೆ (ಎಸ್ಒಪಿ) ಅನುಸರಿಸಲಿರುವ ದೇಶದ ಮೊದಲ ರಾಜ್ಯ ಕೇರಳ. ರಾಜ್ಯದಲ್ಲಿರುವ ಎಲ್ಲ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಮೆದುಳು ಸತ್ತವರ ಅಂಗಾಂಗ ದಾನ ಮಾಡುವಾಗ ಈ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ.
ಕಸಿಗೆ ಅಂಗಾಂಗ ದೊರೆಯುವ ಸಾಧ್ಯತೆ ಕುರಿತಂತೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವಾಲಯ ಶನಿವಾರ ಎಸ್ಒಪಿ ರೂಪಿಸಿದೆ. ಎಸ್ಒಪಿ ಪ್ರಕಾರ, ವೈದ್ಯಕೀಯ ಮಂಡಳಿ ನಾಲ್ವರು ವೈದ್ಯರನ್ನು ಹೊಂದಿರುತ್ತದೆ. ಇದರಲ್ಲಿ ಕನಿಷ್ಠ ಒಬ್ಬರು ಸರಕಾರಿ ವೈದ್ಯರು ಇರುತ್ತಾರೆ. ರೋಗಿಯ ಮೆದುಳು ಸತ್ತಿರುವ ಬಗ್ಗೆ ಘೋಷಿಸಲು ಇವರು ಅಧಿಕೃತ ಅಧಿಕಾರ ಹೊಂದಿದ್ದಾರೆ.
ಆತ/ಆಕೆ ಶೇ. 100ರಷ್ಟು ಗುಣಮುಖರಾಗದ ರೀತಿಯಲ್ಲಿ ಕೋಮಾಕ್ಕೆ ಹೋದರೆ, ರೋಗಿಯ ಮೆದುಳು ಸತ್ತಿದೆ ಎಂದು ಘೋಷಿಸಬಹುದು ಎಂಬ ಮುಖ್ಯ ಶರತ್ತನ್ನು ಎಸ್ಒಪಿಯಲ್ಲಿ ಹೇಳಲಾಗಿದೆ. ಇದರ ದುರ್ಬಳಕೆ ತಡೆಯಲು ಎಸ್ಒಪಿ ಮೆದುಳು ಸತ್ತಿರುವುದನ್ನು ಹಾಗೂ ಕೋಮಾದ ಸ್ಥಿತಿಯನ್ನು ವಿವರವಾಗಿ ವ್ಯಾಖ್ಯಾನಿಸಬೇಕು. ‘‘ಮೆದುಳಿನ ನಿರ್ದಿಷ್ಟ ನರಕ್ಕೆ ಹಾನಿ ಆಗುವುದರಿಂದ ಉಂಟಾಗುವ ಪ್ರಜ್ಞಾಹೀನತೆಯೇ ಕೋಮಾ. ಆದರೆ, ಮೆದುಳಿನಲ್ಲಿ ಅತ್ಯಧಿಕ ರಕ್ತ ಸ್ರಾವವಾಗಿ ಮೆದುಳಿನ ಕೋಶಗಳು ಖಾಯಂ ಆಗಿ ನಾಶವಾಗುವ ಸ್ಥಿತಿ ಮೆದುಳು ಸಾವು.’’ ಎಂದು ಎಸ್ಒಪಿ ಹೇಳಿದೆ.







