ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಎಂಬ ಕಾಂಗ್ರೆಸ್ ಆರೋಪ ಸುಳ್ಳು: ಶಾಸಕ ಮಧು ಬಂಗಾರಪ್ಪ

ಚಿಕ್ಕಮಗಳೂರು, ಎ.9: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಇಂತಹ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ. ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಕಾಂಗ್ರೆಸ್ ಆರೋಪ ಸುಳ್ಳು ಎಂದು ಜೆಡಿಎಸ್ ಯುವ ಘಟಕ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಮಧು ಬಂಗಾರಪ್ಪ ಸ್ಪಷ್ಟ ಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹೋದಲ್ಲೆಲ್ಲಾ ಮತದಾರರಿಗೆ ಜೆಡಿಎಸ್ ಪಕ್ಷ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳಿಗೆ ಮತ ಹಾಕಿದರೆ ಅದು ಬಿಜೆಪಿ ಲಾಭವಾಗಲಿದೆ. ಬಿಜೆಪಿ-ಜೆಡಿಎಸ್ ಒಳಮೈತ್ರಿ ಮಾಡಿಕೊಂಡಿವೆ ಎಂದು ಕಾಂಗ್ರೆಸ್‍ನವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಆರೋಪವಾಗಿದ್ದು, ಜೆಡಿಎಸ್ ಪಕ್ಷ ಯಾವ ಪಕ್ಷದೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಚುನಾವಣೆಯಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಲ್ಲಿ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಸ್ವಂತಂತ್ರವಾಗಿ ಅಧಿಕಾರ ಹಿಡಿಯಲಿದೆ. ತಪ್ಪಿದಲ್ಲಿ ವಿರೋಧ ಪಕ್ಷದ ಸ್ಥಾನವನ್ನು ನಿರ್ವಹಿಸಲಿದೆ. ಒಂದು ವೇಳೆ ಅಲ್ಪ ಬಹುಮತ ಧಕ್ಕಿದಲ್ಲಿ ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆಂದರು.
ಕಾಂಗ್ರೆಸ್ ಢೋಂಗಿ ಜಾತ್ಯತೀತ ಪಕ್ಷವಾಗಿದ್ದು, ಬಿಜೆಪಿ ಧರ್ಮಗಳನ್ನು ಒಡೆದು ರಾಜಕೀಯ ಮಾಡಿದರೆ, ಕಾಂಗ್ರೆಸ್‍ನವರು ಜಾತಿಜಾತಿಗಳನ್ನು ಒಡೆದು ರಾಜಕೀಯ ಮಾಡುತ್ತಿದ್ದಾರೆ. ರಾಹುಲ್‍ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದರ ಹಿಂದೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗುವ ಭೀತಿ ಅವರನ್ನು ಕಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‍ನ ಹಲವು ಮುಖಂಡರ ಮೂಲ ಜೆಡಿಎಸ್ ಪಕ್ಷ ಎಂಬುದನ್ನು ರಾಹುಲ್‍ಗಾಂಧಿ ಅರಿಯಬೇಕಿದೆ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಬದುಕಿರುವುದೇ ಜೆಡಿಎಸ್‍ನ 7 ಮಂದಿ ಬಂಡಾಯ ಶಾಸಕರಿಂದ. ಈ ಶಾಸಕರು ಮಹಾನ್ ಸಾಧನೆ ಮಾಡಲು ಕಾಂಗ್ರೆಸ್ ಸೇರಿಲ್ಲ, ಕೇವಲ ಸ್ವಾರ್ಥಕ್ಕಾಗಿ ಸೇರಿದ್ದಾರೆ ಎಂದು ಟೀಕಿಸಿದರು.
ಜನರ ಧಾರ್ಮಿಕ ಭಾವನೆಗಳನ್ನು ಕೆದಕಿ ರಾಜಕೀಯ ಮಾಡುವ ಬಿಜೆಪಿ ಮುಖಂಡರಿಗೆ ಜೆಡಿಎಸ್ ಪಕ್ಷದ ಬಗ್ಗೆ ಟೀಕೆ ಮಾಡಲು ಯಾವ ಅರ್ಹತೆಯೂ ಇಲ್ಲ. ಕರಾವಳಿ ಭಾಗದಲ್ಲಿ ಹಿಂದುಗಳ ಕೊಲೆಯಾಗುತ್ತಿದೆ ಎಂದು ಬೊಬ್ಬೆ ಹಾಕುವ ಬಿಜೆಪಿಯವರಿಗೆ ಮುಸ್ಲಿಮರ ಸಾವು ಸಾವಲ್ಲವೇ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ರಾಜ್ಯಕ್ಕೆ ಕರೆಸಿಕೊಂಡು ಬರೆದುಕೊಟ್ಟ ಭಾಷಣ ಓದಿಸುತ್ತಾ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಬೆಂಗಳೂರು, ಮೈಸೂರಿಗೆ ಬಂದಿದ್ದಾಗ ಬಿಜೆಪಿಯವರು ಬರೆದು ಕೊಟ್ಟ ಭಾಷಣದಲ್ಲಿ ಮಹಾದಾಯಿ ನೀರಿನ ಬಗ್ಗೆ ಒಂದೇ ಒಂದು ಪದ ಸೇರಿಸಿಲ್ಲವೇಕೆ ಎಂಬನುದನ್ನು ಬಿಜೆಪಿಯವರು ಜನರಿಗೆ ತಿಳಿಸಬೇಕೆಂದರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ರಾಜ್ಯದ ಅಧಿಕಾರ ನಾವೇ ಹಿಡಿಯುತ್ತೇವೆ ಎಂದು ಕೊಚ್ಚಿಕೊಳ್ಳುತ್ತಿವೆ. ಆದರೆ ಈ ಪಕ್ಷಗಳು ಇದುವರೆಗೂ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ. ಆದರೆ ಜೆಡಿಎಸ್ ಬಿಎಸ್ಪಿ ಮೈತ್ರಿ ಬಳಿಕ ಈ ಹಿಂದೆಯೇ 146 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಧೈರ್ಯವಾಗಿ ಬಿಡುಗಡೆ ಮಾಡಿದ್ದೇವೆ. ರಾಷ್ಟ್ರೀಯ ಪಕ್ಷಗಳಿಗೆ ಈ ಧೈರ್ಯವೇ ಇಲ್ಲ, 146 ಅಭ್ಯರ್ಥಿಗಳ ಪೈಕಿ 80-82 ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆಂದು ಸರ್ವೇ ರಿಪೋರ್ಟ್ ಹೇಳಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಜನರ ವಿಶ್ವಾಸಗಳಿಸುವಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಮುಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೂಡಿಗೆರೆ ಶಾಸಕ ಹಾಗೂ ಅಭ್ಯರ್ಥಿ ಬಿ.ಬಿ.ನಿಂಗಯ್ಯ, ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಹರೀಶ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಜಿಲ್ಲಾ ಮುಖಂರಾದ ನರಸಿಂಹಮೂರ್ತಿ, ರಮೇಶ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ಚುನಾವಣೆಯಲ್ಲಿ ಅಣ್ಣತಮ್ಮಂದಿರ ವಿಚಾರ ಬರುವುದಿಲ್ಲ
ಸೊರಬ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಹೋದರ ಕುಮಾರ್ ಬಂಗಾರಪ್ಪ ಕಣಕ್ಕಿಳಿಯಲಿದ್ದಾರೆನ್ನಲಾಗುತ್ತಿದೆ. ಕುಮಾರ್ ಬಂಗಾರಪ್ಪ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಸೇರಿರಬಹುದು. ಅವರನ್ನು ಸೋಲಿಸುವುದು ನನ್ನ ಉದ್ದೇಶವಲ್ಲ. ನಾನು ಗೆಲ್ಲುವುದೇ ನನ್ನ ಗುರಿ. ಚುನಾವಣೆಯಲ್ಲಿ ಅಣ್ಣತಮ್ಮಂದಿರ ವಿಚಾರ ಬರುವುದಿಲ್ಲ. ನಾನು ಬಾರೀ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ.







