ದೇಶದ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡವರು ಆ ಮಾತುಗಳನ್ನು ಆಡುವುದಿಲ್ಲ: ಯು.ಟಿ.ಖಾದರ್
ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಗೆ ಸಚಿವರ ಪ್ರತಿಕ್ರಿಯೆ

ಮಂಗಳೂರು, ಎ.9: ದೇಶದ ಸಂಸ್ಕೃತಿಯನ್ನು ತಿಳಿದುಕೊಂಡವರು ಈ ರೀತಿಯ ಮಾತುಗಳನ್ನು ಹೇಳಲು ಸಾಧ್ಯವಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ ತಾನು ದೇವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಬಗ್ಗೆ ಮಾಡಿರುವ ಟೀಕೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿಂದು ಪ್ರತಿಕ್ರಿಯೆ ನೀಡಿದರು.
ಭಾರತ ಬಹು ಸಂಸ್ಕೃತಿಯ ದೇಶ. ಈ ದೇಶದ ಎಲ್ಲಾ ಜಾತಿ, ಧರ್ಮದ ಜನರ ಬಗ್ಗೆ ಪರಸ್ಪರ ಗೌರವದಿಂದ ಶಾಂತಿ ಸೌಹಾರ್ದತೆಯೊಂದಿಗೆ ಬದುಕ ಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ. ನಾನು ಇತರ ಧರ್ಮದವರನ್ನು ಗೌರವಿಸುವುದು, ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ರಾಜಕೀಯ ದಿಂದ ಬಂದಿರುವುದಲ್ಲ. ನಾನು ಬಾಲ್ಯದಿಂದಲೇ ಎಲ್ಲಾ ಜಾತಿ, ಧರ್ಮದ ಜನರ ಜೊತೆ ಬದುಕಿದವನು. ಅವರ ಧರ್ಮ, ಆಚರಣೆಗಳ ಬಗ್ಗೆ ಗೌರವ ಭಾವನೆ ಹೊಂದಿದ್ದೆ. ಅವರು ನನ್ನನ್ನು ಗೌರವದಿಂದ ಕಾಣುತ್ತಿದ್ದರೆ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯ ಬಗ್ಗೆ ಸಾಕಷ್ಟು ಜನರು ನನಗೆ ದೂರವಾಣಿ ಕರೆ ಮಾಡಿ ಅದರಿಂದ ಬೇಸರ ಮಾಡಿಕೊಳ್ಳಬೇಡಿ ಎಂದಿದ್ದಾರೆ. ನನ್ನ ಕ್ಷೇತ್ರದ ಹೊರಗಿನಿಂದಲೂ ಜನರು ತಮ್ಮ ಧಾರ್ಮಿಕ ಕ್ಷೇತ್ರಗಳಿಗೆ ಆಹ್ವಾನಿಸುವುದು ಹೆಚ್ಚಾಗಿದೆ ಹೊರತು ಕಡಿಮೆಯಾಗಿಲ್ಲ. ನನ್ನ ಬಗ್ಗೆ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಆ ಜನರು ಅವರಿಗೆ ಉತ್ತರ ನೀಡುತ್ತಾರೆ. ದೇಶದಲ್ಲಿ, ಜಿಲ್ಲೆಯಲ್ಲಿ ಬಹು ಸಂಸ್ಕೃತಿ ಇನ್ನೂ ಜೀವಂತವಾಗಿದೆ. ನನ್ನ ಕ್ಷೇತ್ರದಲ್ಲಿ ಹಾಗೂ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಕಾಮಗಾರಿಗಳ ಬಗ್ಗೆ ಜನರಿಗೆ ತಿಳಿದಿದೆ. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ಎಂಟರಲ್ಲೂ ಈ ಬಾರಿ ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಜಯಗಳಿಸಲಿದೆ ಎಂದು ಸಚಿವ ಯು.ಟಿ.ಖಾದರ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆಯನ್ನು ತಡೆಯಲು ಗಡಿ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈ ಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಗೋ ಸಂರಕ್ಷಣಾ ಕೇಂದ್ರದಲ್ಲೂ ಕೆಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಸೂಕ್ತ ನಿಯಮಗಳನ್ನು ರೂಪಿಸಬೇಕಾದ ಅಗತ್ಯವಿದೆ. ಮಾಂಸ ರಫ್ತು ಮಾಡುವ ದೇಶಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಗುಜರಾತ್, ಉತ್ತರ ಪ್ರದೇಶದಿಂದ ಗರಿಷ್ಠ ಪ್ರಮಾಣದಲ್ಲಿ ಗೋಮಾಂಸ ರಪ್ತಾಗುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವವರು ದೇಶದಲ್ಲಿ ಗೋ ಮಾಂಸ ನಿಷೇಧದ ಬಗ್ಗೆ ಏಕ ರೀತಿಯ ನೀತಿಯನ್ನು ಕೇಂದ್ರ ಸರಕಾರ ಜಾರಿಗೆ ತರಲಿ ಎಂದು ಸಚಿವ ಯು.ಟಿ.ಖಾದರ್ ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಮಮತಾ ಗಟ್ಟಿ, ಈಶ್ವರ ಉಳ್ಳಾಲ್, ಶ್ರೀನಿವಾಸ ಶೆಟ್ಟಿ ಉಳ್ಳಾಲ್, ಸದಾಶಿವ ಉಳ್ಳಾಲ್, ಎನ್.ಎಸ್.ಕರೀಂ, ಮುಹಮ್ಮದ್ ಮೋನು, ಚಂದ್ರಹಾಸ ಕರ್ಕೇರಾ, ಪದ್ಮ ನಾಭ ನರಿಂಗಾನ, ಧನಂಜಯ ಅಡ್ಪಂಗಾಯ ಮೊದಲಾದವರು ಉಪಸ್ಥಿತರಿದ್ದರು.







