ಬಂಟ್ವಾಳ ಸಬ್‌ಡಿವಿಷನ್ ಪೊಲೀಸ್ ಕಚೇರಿ: ಇನ್ನೂ ನಿಯುಕ್ತಿಯಾಗದ ಎಎಸ್ಪಿ/ಡಿವೈಎಸ್ಪಿ ಗ್ರೇಡ್‌ನ ಅಧಿಕಾರಿ !
ಬಿ.ಸಿ.ರೋಡ್‌ನ ನಗರ ಪೊಲೀಸ್ ಠಾಣೆಯ ಹಳೆಯ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಎಎಸ್ಪಿ ಕಚೇರಿ

ಬಂಟ್ವಾಳ, ಎ. 9: ಬಂಟ್ವಾಳ ಸಬ್‌ಡಿವಿಷನ್ ಪೊಲೀಸ್ ಕಚೇರಿಗೆ ಇದುವರೆಗೂ ಪೂರ್ಣ ಪ್ರಮಾಣದ ಎಎಸ್ಪಿ ಅಥವಾ ಡಿವೈಎಸ್ಪಿ ಅಧಿಕಾರ ಸ್ವೀಕರಿಸಿಲ್ಲ. ಜನವರಿ ತಿಂಗಳಿನಿಂದ ಈ ಹುದ್ದೆ ಖಾಲಿಯಾಗಿದ್ದು, ಹೊಸ ಸಿಬ್ಬಂದಿ ನೇಮಕವಾಗದೆ ಕಚೇರಿ ಕಳೆಗುಂದಿದೆ.
ದ.ಕ.ಜಿಲ್ಲೆಯ ಕೋಮು ಸೂಕ್ಷ್ಮಪ್ರದೇಶ, ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಸೆಕ್ಷನ್ 144ರನ್ವಯ ನಿಷೇಧವಾದ ಪ್ರದೇಶ ಬಂಟ್ವಾಳ ತಾಲೂಕು. ಕಳೆದ ಮೇ 27ರಿಂದ ಜುಲೈ 26ರವರೆಗೆ ಸತತ 61 ದಿನಗಳ ಕಾಲ ನಿರಂತರವಾಗಿ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದರು.
ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಪೊಲೀಸರಿಗೆ ಕ್ಯಾರೇ ಎನ್ನದೆ, ಮತ್ತೆ ಎರಡು ಕೊಲೆಗಳು ನಡೆದವು. ಇವು ಬಂಟ್ವಾಳ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿ ದಾಖಲಾಯಿತು. ಅಲ್ಲದೆ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ಜಿ.ಜಗದೀಶ್ ಅವರು ಒಟ್ಟು 9 ಬಾರಿ ಸೆ.144ರನ್ವಯ ನಿಷೇಧಾಜ್ಞೆ ವಿಧಿಸಿದ್ದರು.
ನಿಷೇಧಾಜ್ಞೆಯ ಅವಧಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಹಾಗೂ ಅಧಿಕಾರಿಗಳ ವರ್ಗಾವಣೆ ಮಾಡಲಾಗಿತ್ತು. ಈ ಅವಧಿಯಲ್ಲಿ ಕಾರ್ಯಾ ಚರಿಸುತ್ತಿದ್ದ ಎಸ್ಪಿ, ಅಡಿಸನಲ್ ಎಸ್ಪಿ, ಡಿವೈಎಸ್ಪಿ ಸಹಿತ ಸರ್ಕಲ್ ಇನ್‌ಸ್ಪೆಕ್ಟರ್‌ಗಳನ್ನು ಕೂಡಾ ವರ್ಗಾವಣೆ ಮಾಡಲಾಗಿತ್ತು. ಈ ಪೈಕಿ ಡಿವೈಎಸ್ಪಿ ಬದಲು ಎಎಸ್ಪಿ ಅರುಣ್ ಅವರು ಕೆಲ ಸಮಯ ಕಾರ್ಯನಿರ್ವಹಿಸಿದ್ದು, ತದನಂತರ ಅವರೂ ಕೂಡಾ ವರ್ಗಾವಣೆಯಾದರು.
ಇದೀಗ ಜನವರಿಯಿಂದ ಖಾಲಿಯಿರುವ ಹುದ್ದೆಗೆ ಪೂರ್ಣಕಾಲಿಕವಾಗಿ ನಿರ್ವಹಿಸಲು ಯಾರೂ ಕೂಡಾ ನೇಮಕವಾಗಿಲ್ಲ. ಒಂದು ಹಂತದಲ್ಲಿ ಅಡಿಷನಲ್ ಎಸ್ಪಿ ಬಂಟ್ವಾಳದಲ್ಲೇ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಇದುವರೆಗೂ ಬಂಟ್ವಾಳದಲ್ಲಿ ಕುಳಿತುಕೊಂಡಿಲ್ಲ ಎಂದು ಸ್ಥಳೀಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೆ ಮುಂದಿನ ದಿನಗಳಲ್ಲಿ ವಿಧಾನಸಭಾ ಚುನಾವಣೆಯು ನಡೆಯಲಿದ್ದು, ಅತೀ ಸೂಕ್ಷ್ಮ ಪ್ರದೇಶವಾದ ಈ ಎರಡು ತಾಲೂಕಿನ ಭದ್ರತೆಗೆ ಅತೀ ಮುಖ್ಯವಾಗಿ ಬೇಕಾಗಿದ್ದ ಈ ಹುದ್ದೆ ಖಾಲಿಯಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಹೇಗೆ ಸಾಧ್ಯ? ಎಂದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಬಂಟ್ವಾಳ, ಬೆಳ್ತಂಗಡಿ ವ್ಯಾಪ್ತಿ
2013ರಲ್ಲಿ ಬಂಟ್ವಾಳ ಸಬ್‌ಡಿವಿಷನ್ ಪೊಲೀಸ್ ಕಚೇರಿ ಬಿ.ಸಿ.ರೋಡಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಬಂಟ್ವಾಳ ಮತ್ತು ಬೆಳ್ತಂಗಡಿ ಎರಡು ತಾಲೂಕಿನ ಸರ್ಕಲ್‌ಗೆ ಬಿ.ಸಿ.ರೋಡ್‌ನ ನಗರ ಪೊಲೀಸ್ ಠಾಣೆಯ ಹಳೆಯ ಕಟ್ಟಡದಲ್ಲಿ ಎಎಸ್ಪಿ ಕಚೇರಿ ಕಾರ್ಯಚರಿಸುತ್ತಿವೆ. ಡಿವೈಎಸ್ಪಿ ಸದಾನಂದ ವರ್ಣೇಕರ್, ಡಿವೈಎಸ್ಪಿ ರಶ್ಮೀ ಪರಡ್ಡಿ, ಎಎಸ್ಪಿ ರಾಹುಲ್ ಕುಮಾರ್, ಡಿವೈಎಸ್ಪಿ ರವೀಶ್ ಮತ್ತು ಎಎಸ್ಪಿ ಅರುಣ್ ಕುಮಾರ್ ಅವರು ಕಾರ್ಯನಿರ್ವಹಿಸಿದ್ದರು.
ಅರುಣ್ ಕುಮಾರ್ ಅವರು ಲೋಕಾಯುಕ್ತ ಎಸ್ಪಿಯಾಗಿ ಬೆಂಗಳೂರಿಗೆ ವರ್ಗಾವಣೆಯಾದ ಬಳಿಕ ಇಲ್ಲಿಯವರೆಗೆ ಹೊಸ ಎಎಸ್ಪಿ ಅಥವಾ ಡಿವೈಎಸ್ಪಿ ಗ್ರೇಡ್‌ನ ಅಧಿಕಾರಿ ನಿಯುಕ್ತಿಯಾಗಿಲ್ಲ.







