ದ.ಕ.ಜಿಲ್ಲೆ ‘ಮಿಂಚಿನ’ ನೋಂದಣಿಗೆ ಉತ್ತಮ ಸ್ಪಂದನೆ
ಮಂಗಳೂರು, ಎ.9: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೆ ಬಾಕಿಯಿರುವ ಅರ್ಹ ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಬಗ್ಗೆ ರವಿವಾರ ನಡೆದ ‘ಮಿಂಚಿನ’ ನೋಂದಣಿಗೆ ದ.ಕ.ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 17,178 ಮಂದಿ ಹೆಸರು ಸೇರ್ಪಡೆಗೊಳಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಬಾಕಿಯುಳಿದ ಅರ್ಹ ಮತದಾರರು ತಮ್ಮ ಹೆಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸುವ ಸಲುವಾಗಿ ರವಿವಾರ ‘ಮಿಂಚಿನ’ ನೋಂದಣಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿತ್ತು.
ಬೆಳ್ತಂಗಡಿ ಕ್ಷೇತ್ರದಲ್ಲಿ ಅತೀ ಕಡಿಮೆ ಅಂದರೆ 926 ಹಾಗೂ ಮಂಗಳೂರು ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ 3,498 ಮಂದಿ ಹೆಸರು ನೋಂದಣಿ ಮಾಡಿಸಿದ್ದಾರೆ. ಉಳಿದಂತೆ ಮೂಡುಬಿದಿರೆ ಕ್ಷೇತ್ರದಲ್ಲಿ 2,270, ಮಂಗಳೂರು ಉತ್ತರ 2,264, ಮಂಗಳೂರು ದಕ್ಷಿಣ 2,097, ಬಂಟ್ವಾಳ 2,302, ಪುತ್ತೂರು 1,753, ಸುಳ್ಯ 2,068 ಮಂದಿ ಹೆಸರು ನೋಂದಣಿ ಮಾಡಿದ್ದಾರೆ. ಇದರಲ್ಲಿ ಹೊಸ ಮತದಾರರ ಸೇರ್ಪಡೆ, ಹೆಸರು ಮತ್ತು ವಿಳಾಸ ಬದಲಾವಣೆಯೂ ಸೇರಿದೆ.





