ಮೇ 1: ಪಗ್ಗು ಪದಿನೆನ್ಮ -ಸಿರಿದಿನ - ಸಿರಿದಾನ್ಯ ಮೇಳ
ಮಂಗಳೂರು, ಎ.9: ತುಳುನಾಡಿನಿಂದ ಮರೆಯಾಗುತ್ತಿರುವ ಆಚರಣೆಗಳಲ್ಲಿ ಪಗ್ಗು-18 (ಪಗ್ಗು-18 ಪದಿನೆನ್ಮ) ಕೂಡಾ ಒಂದಾಗಿದ್ದು, ಅಂದು ಸಿರಿಧಾನ್ಯಗಳನ್ನು ಬಿತ್ತುವುದು ಪ್ರಧಾನ. ಆ ಹಿನ್ನೆಲೆಯಲ್ಲಿ ತುಳುವೆರೆ ಆಯನೊ ಕೂಟವು ನಾಲ್ಕು ವರ್ಷಗಳಿಂದ ಪಗ್ಗು ಪದಿನೆನ್ಮ-ಸಿರಿದಿನವೆಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಅಲ್ಲದೆ ಪಗ್ಗು-18 ಏಳ್ವೆರ್ ಸಿರಿಗಳಾದ ಅಬ್ಬಗೆ ಧಾರಗೆಯರ ಜನ್ಮದಿನವು ಆಗಿದೆ. ಇದನ್ನು ಸಾರ್ವತ್ರಿಕವಾಗಿಸಬೇಕೆಂಬ ನಿಟ್ಟಿನಲ್ಲಿ ಈ ವರ್ಷ ಬಂಟರ ಯಾನೆ ನಾಡವರ ಮಾತೃ ಸಂಘ ಮಹಿಳಾ ವಿಭಾಗ ಶಕ್ತಿ ಇದರ ನೆತೃತ್ವದಲ್ಲಿ ಹಾಗೂ ದೇಶಿ ಉತ್ಥಾನ ಸಾವಯವ ರೈತ ಬಂಧು ಟ್ರಸ್ಟ್ (ರಿ), ಆರೋಗ್ಯ ಭಾರತಿ ಮಂಗಳೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೇ 1ರಂದು ಅಪರಾಹ್ನ 2ರಿಂದ ನಗರದ ಬಂಟ್ಸ್‌ಹಾಸ್ಟೆಲ್ ಪರಿಸರದಲ್ಲಿ ಪಗ್ಗು ಪದಿನೆನ್ಮ -ಸಿರಿದಿನ ಮತ್ತು ಸಿರಿದಾನ್ಯ ಮೇಳ ನಡೆಸಲಾಗುವುದು.
ಸಮಾರಂಭದಲ್ಲಿ ಸಮಾಜದ ಧ ಸ್ತರಗಳಲ್ಲಿ ಸಾಧನೆಗೈಧ ಏಳುಜನ ಮಹಿಳೆಯರಿಗೆ ಏಳ್ವೆರ್ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಲ್ಲದೆ ಸಿರಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ರಸಪ್ರಶ್ನೆ ಸ್ಪರ್ಧೆ, ಸಿರಿ-2018 ಎಂಬ ಸಿರಿವೇಷ ಸ್ಪರ್ಧೆ ಹಾಗೂ ಸಿರಿ ಪಾಡ್ದನ ಹಾಡುವ ಸ್ಪರ್ಧೆ ನಡೆಯಲಿವೆ.
ಕಾರ್ಯಕ್ರಮದ ಅಂಗವಾಗಿ ಸಿರಿಧಾನ್ಯಗಳ ಪ್ರದರ್ಶನ, ಸಿರಿಧಾನ್ಯ ಆಹಾರ ಉತ್ಪನ್ನಗಳ ಮಾರಾಟ ಹಾಗೂ ಪ್ರಾತ್ಯಕ್ಷಿಕೆ, ಆರೋಗ್ಯ ಸಿರಿ, ಸಾವಯವ ಹಾಗೂ ಸಿರಿಧಾನ್ಯಗಳ ವಿಚಾರಗೋಷ್ಠಿಗಳು ನಡೆಯಲಿವೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ತಿಳಿಸಿದ್ದಾರೆ.







