ಪಕ್ಷದ ಗೆಲುವಿಗೆ ಕಾರ್ಯಕರ್ತರು ಗಮನ ಹರಿಸಿ- ಶಕುಂತಳಾ ಶೆಟ್ಟಿ

ಪುತ್ತೂರು, ಎ. 9: ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಲು ಹಾಗೂ ಪುತ್ತೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಭರ್ಜರಿಯಾಗಿ ಗೆಲ್ಲಿಸಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹೊಸ ಉತ್ಸಾಹದಿಂದ ಸಂಘಟನೆಯತ್ತ ಗಮನ ಹರಿಸಬೇಕು. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚು ಮತ ಪಡೆದುಕೊಳ್ಳುವಂತಾಗಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಸೋಮವಾರ ನಗರದ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಆರಂಭಿಸಲಾದ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಶಾಸಕಿ ಶಕುಂತಳಾ ಶೆಟ್ಟಿ ಅವರ ಕ್ಷೇತ್ರಕ್ಕಾಗಿ ರಕ್ತವನ್ನೇ ಬೆವರಾಗಿಸಿ ಕೆಲಸ ಮಾಡಿರುವುದು ಅವರ ಗೆಲುವಿಗೆ ದಾರಿದೀಪವಾಗಿದೆ. ಜಾತ್ಯಾತೀತ ಪರಿಕಲ್ಪನೆಯ ಪಕ್ಷದ ಬೆಳವಣಿಗೆಯಲ್ಲಿ ಇಲ್ಲಿನ ಕಾರ್ಯಕರ್ತರ ಮಾತು ಮತ್ತು ಮೌನ ಎರಡೂ ಪೂರಕವಾಗಿದೆ ಎಂದರು.
ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ, ಉಳಿದಿರುವ ಕೆಲವೇ ದಿನಗಳಲ್ಲಿ ಕಾರ್ಯಕರ್ತರು, ಮುಖಂಡರು ಇನ್ನಷ್ಟು ಕೆಲಸ ಮಾಡಬೇಕಾಗಿದೆ. ಪಕ್ಷವನ್ನು ಗೆಲ್ಲಿಸಲು ಶ್ರಮಿಸಬೇಕು ಎಂದರು.
ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ ಮಾತನಾಡಿ, ಇದುವರೆಗೆ ಅಭ್ಯರ್ಥಿ ಘೋಷಣೆ ಆಗಿಲ್ಲ. ಆದರೂ ವರ್ಷದ ಹಿಂದಿನಿಂದಲೇ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ದುಡಿಯುತ್ತಿದ್ದೇವೆ. ಶಕುಂತಳಾ ಶೆಟ್ಟಿ ಅವರೇ ನಮ್ಮ ಮುಂದಿನ ಅಭ್ಯರ್ಥಿ ಎಂಬುದನ್ನು ಮನದಲ್ಲಿಟ್ಟುಕೊಂಡು ಕೆಲಸ ಮಾಡಿದ್ದೇವೆ. ಮನಸ್ಸಿನ ಎಲ್ಲ ನೋವನ್ನು ಬದಿಗಿಟ್ಟು, ಪಕ್ಷಕ್ಕಾಗಿ ಶ್ರಮಿಸುವಂತೆ ಕರೆ ನೀಡಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹುಸೈನ್ ದಾರಿಮಿ ಮಾತನಾಡಿ, ಪಕ್ಷವನ್ನು ಗೆಲ್ಲಿಸುವಲ್ಲಿ ಎಲ್ಲರೂ ದುಡಿಯುತ್ತಿದ್ದಾರೆ. ಆದರೂ ಕೆಲವರು ದೂರ ನಿಂತಿದ್ದಾರೆ. ಅವರೂ ಹತ್ತಿರ ಬರುತ್ತಾರೆ. ಶಾಸಕಿ ಶಕುಂತಳಾ ಶೆಟ್ಟಿ ಸಚಿವೆ ಆಗಬೇಕು. ಎಲ್ಲರೂ ಅವರಿಗೆ ಸಾಥ್ ನೀಡಬೇಕು ಎಂದರು.
ಪುತ್ತೂರು ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ,ಕಾಂಗ್ರೆಸ್ ಸೇವಾದಳದ ಜೋಕಿಂ ಡಿ’ಸೋಜಾ, ಕೆಪಿಸಿಸಿ ಸದಸ್ಯ ನೂರುದ್ದೀನ್ ಸಾಲ್ಮರ. ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ಎಂ.ಪಿ .ಅಬೂಬಕ್ಕರ್, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಝಲ್ ರಹೀಂ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಜಿಲ್ಲಾ ಕಾಂಗ್ರೆಸ್ ಸದಸ್ಯ ಐತ್ತಪ್ಪ ಪೇರೊಳ್ತಡ್ಕ, ರಮಾನಾಥ ವಿಟ್ಲ, ಮಹೇಶ್ ರೈ ಅಂಕೊತ್ತಿಮಾರು, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.
ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ವಂದಿಸಿದರು.







