ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪತ್ರ ಕಡ್ಡಾಯ : ಚುನಾವಣಾಧಿಕಾರಿ ವಿ.ಪ್ರಸನ್ನ

ಮೂಡುಬಿದಿರೆ, ಎ.9 : ಖಾಸಗಿ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಳಸುವ ಧ್ವನಿವರ್ಧಕಗಳಿಗೆ ಚುನಾವಣಾಧಿಕಾರಿ ಗಳಿಂದ ಕಡ್ಡಾಯವಾಗಿ ಅನುಮತಿ ಪತ್ರವನ್ನು ಪಡೆದುಕೊಳ್ಳಬೇಕೆಂದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ವಿ.ಪ್ರಸನ್ನ ಅವರು ತಿಳಿಸಿದ್ದಾರೆ.
ಅವರು ಸೋಮವಾರ ತಹಶೀಲ್ದಾರ್ ಕಛೇರಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಮತ್ತು ಪ್ರಕ್ರಿಯೆಗಳ ಬಗ್ಗೆ ಮಾಹಿತಿಯನ್ನು ನೀಡಿ ಮಾತ ನಾಡಿದರು. ಧಾರ್ಮಿಕ ಸಂಸ್ಥೆಗಳ ಒಳಗಡೆ ಧ್ವಜಗಳು ಇರಬಹುದು ಆದರೆ ಹೊರಗಡೆ ಬೇರೆಯವರಿಗೆ ಕಾಣುವಂತಿರಬಾರದು. ಈ ಬಗ್ಗೆ ಧಾರ್ಮಿಕ ಮುಖಂಡರುಗಳ ಸಭೆ ಕರೆದು ಅವರಿಗೆ ತಿಳಿಸಲಾಗುವುದು. ಖಾಸಗಿ ಅಥವಾ ಇತರ ಕಾರ್ಯಕ್ರಮಗಳಿಗೆ ಧ್ವನಿವರ್ಧಕಗಳನ್ನು ಬಳಸದಿದ್ದರೆ ಅನುಮತಿ ಬೇಕಿಲ್ಲ ಆದರೆ ಆವರಣದೊಳಗೆ ಅಥವಾ ಇತರರಿಗೆ ಕೇಳಿಸುವಂತೆ ಧ್ವನಿವರ್ಧಕಗಳಿದ್ದರೆ ಅನುಮತಿ ಪತ್ರ ಅಗತ್ಯ.
ರಾಜಕೀಯ, ಖಾಸಗಿ, ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲು ಅಥವಾ ಕಾರ್ಯಕ್ರಮ ನಡೆಸುವವರು ಯಾವುದೇ ಕಾರಣಗಳಿಗೆ ಸಾರ್ವಜನಿಕ ಸ್ಥಳಗಳಾದ ರಸ್ತೆ, ಪಾದಾಚಾರಿ ಮಾರ್ಗ, ಕಾಲುವೆ, ಸಾರ್ವಜನಿಕ ವಿದ್ಯುತ್ ಕಂಬ, ಟೆಲಿಫೋನ್ ಕಂಬ ಇತ್ಯಾದಿಗಳ ಮೇಲೆ ಬ್ಯಾನರ್, ಬಂಟಿಂಗ್ ಫ್ಲೆಕ್ಸ್ ಮತ್ತು ಪೋಸ್ಟರ್ಸ್‌ಗಳನ್ನು ಹಾಕಬಾರದು. ಕಾರ್ಯಕ್ರಮ ನಡೆಸುವ ವೇದಿಕೆ ಹಾಗೂ ಪ್ರವೇಶ ದ್ವಾರದಲ್ಲಿ ಮಾತ್ರ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಕಾರ್ಯಕ್ರಮ ನಡೆಯುವ 2 ಗಂಟೆ ಪೂರ್ವದಲ್ಲಿ ಮಾತ್ರ ಕಾರ್ಯಕ್ರಮ ನಡೆಯುವ ಆವರಣದಲ್ಲಿ ಬ್ಯಾನರ್, ಬಂಟಿಂಗ್ ಫ್ಲೆಕ್ಸ್ ಮತ್ತು ಪೋಸ್ಟರ್ಸ್‌ಗಳನ್ನು ಅಳವಡಿಸಿ ಕಾರ್ಯಕ್ರಮ ಮುಗಿದ ಒಂದು ಗಂಟೆಯೊಳಗೆ ತೆರವು ಮಾಡಬೇಕು. ಚುನಾವಣೆಯ ಸಂದರ್ಭದಲ್ಲಿ ಅಲ್ಲಿಯೇ ಕೌಂಟರ್ ತೆಗೆದು ಮತದಾರರ ಚೀಟಿಯನ್ನು ವಿತರಿಸುವ ಕಾರ್ಯಕ್ರಮ ಮಾಡಬೇಕೆಂದು ಮೂಡಾ ಅಧ್ಯಕ್ಷ ಸುರೇಶ್ ಪ್ರಭು ಸಲಹೆಯನ್ನು ನೀಡಿದಾಗ ಆ ಕೆಲಸವನ್ನು ಚುನಾವಣಾ ಆಯೋಗವೇ ಮಾಡುವುದಾಗಿ ಚುನಾವಣಾಧಿಕಾರಿ ತಿಳಿಸಿದರು.
ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಬೂತ್‌ಗಳನ್ನು ಅಳವಡಿಸುವ ಬಗ್ಗೆ ಸಿಪಿಐ (ಎಂ)ಮುಖಂಡ ಯಾದವ ಶೆಟ್ಟಿ ಪ್ರಶ್ನಿಸಿದಾಗ ಪೂರಕ ಮಾಹಿತಿಯನ್ನು ನೀಡಿದರು. ವಿಧಾನ ಪರಿಷತ್ ಚುನಾವಣೆಗೆ ಪ್ರಚಾರ ಮಾಡುವ ಬಗ್ಗೆ ಜೆಡಿಎಸ್ ಮುಖಂಡ ಅಶ್ವಿನ್ ಜೊಸ್ಸಿ ಮಾಹಿತಿ ಕೇಳಿದಾಗ ಉತ್ತರಿಸಿದ ಅಧಿಕಾರಿ ಅವರು ಚುನಾವಣೆ ಡಿಕ್ಲೆರ್ ಆಗದಿರುವುದರಿಂದ ತೊಂದರೆ ಇಲ್ಲ ಮುದ್ರಣ ಮಾಡಿದ್ದರೆ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿ ಪ್ರಚಾರ ಆದ್ರೆ ಪಕ್ಷದ ಖರ್ಚಿನ ಲೆಕ್ಕಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದ ಅವರು ರಾಜಕೀಯ ಪಕ್ಷಗಳ ಕರಪತ್ರ ಮುದ್ರಿಸುವ ಬಗ್ಗೆ, ನೀತಿ ಸಂಹಿತೆಯ ಮಾನದಂಡಗಳನ್ನು ವಿವರಿಸಿ ಈ ಬಗ್ಗೆ ಮುದ್ರಣ ಮಾಧ್ಯಮದವರನ್ನು ಕರೆದು ಮೀಟಿಂಗ್ ನಡೆಸಿ ತಿಳಿಸಲಾಗುವುದು ಎಂದರು.
ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳದ್ದಲ್ಲಿ ಚುನಾವಣಾಧಿಕಾರಿ ದೂರವಾಣಿ ಸಂಖ್ಯೆ 9731192244, ಸಹಾಯಕ ಚುನಾವಣಾಧಿಕಾರಿ-9731943443 ಅವರ ಕಛೇರಿಯನ್ನು ಹಾಗೂ ಅಬಕಾರಿ ಅಧಿಕಾರಿ 0824-2213872, ಜಿಲ್ಲಾಧಿಕಾರಿ ಕಛೇರಿ ಕಂಟ್ರೋಲರ ರೂಂ ದೂರವಾಣಿ 0824-2420002ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿ ಆರ್.ಬಿ ಶಿವಶಂಕರಪ್ಪ, ನೀತಿ ಸಂಹಿತೆ ನೋಡಲ್ ಅಧಿಕಾರಿ ಲಕ್ಷ್ಮೇಗೌಡ ಮೂಡುಬಿದಿರೆ ಪ್ರಭಾರ ಪೊಲೀಸ್ ನಿರೀಕ್ಷಕ ಶ್ರೀಕಾಂತ್ ಹಾಗೂ ಚುನಾವಣಾ ಖರ್ಚುವೆಚ್ಚವನ್ನು ನೋಡಿಕೊಳ್ಳುವ ಅಧಿಕಾರಿಗಳು ಉಪಸ್ಥಿತರಿದ್ದರು.
ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ 3 ಫ್ಲೆಯಿಂಗ್ ಸ್ಕಾಡ್, 6 ಎಸ್.ಎಸ್.ಟಿ ತಂಡ (3 ಚೆಕ್ ಪೋಸ್ಟ್), 3 ವೀಡಿಯೊ ದಾಖಲೀಕರಣ ತಂಡ, ನೀತಿ ಸಂಹಿತೆ ತಂಡ ರಚಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ಕಂಡು ಬಂದಲ್ಲಿ ನೀತಿ ಸಂಹಿತೆ ತಂಡದ ಅಧಿಕಾರಿ ಅವರ ದೂರವಾಣಿ ಸಂಖ್ಯೆ 9448418811 ಇದಕ್ಕೆ ಮತ್ತು ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿಗೆ ಕಂಟ್ರೋಲ್ ದೂರವಾಣಿ ಸಂಖ್ಯೆ 08258238100 ಹಾಗೂ ಅನ್‌ಲೈನ್ ಅಪ್ಲಿಕೇಶನ್ ಸಮಾಧಾನ್ ಮೂಲಕವೂ ದೂರುಗಳನ್ನು ದಾಖಲಿಸಬಹುದು. ದೂರುಗಳ ಬಗ್ಗೆ 24 ಗಂಟೆಗಳೊಳಗೆ ಸಮಸ್ಯೆಯನ್ನು ಬಗೆ ಹರಿಸಲಾಗುವುದು
- ವಿ.ಪ್ರಸನ್ನ ಚುನಾವಣಾಧಿಕಾರಿ







