ಬಿಜೆಪಿ ಅಧಿಕಾರಕ್ಕೆ ಬಂದರೆ ರಿಕ್ಷಾ ಚಾಲಕರಿಗೆ ವಸತಿ ಸೌಲಭ್ಯ: ಯಡಿಯೂರಪ್ಪ ಭರವಸೆ

ಬೆಂಗಳೂರು, ಎ. 9: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಿಕ್ಷಾ ಚಾಲಕರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಕುಡಿಯುವ ನೀರು, ವಿದ್ಯುತ್ ಸೇರಿ ಎಲ್ಲ ಸೌಲಭ್ಯಗಳಿರುವ ಅಪಾರ್ಟ್‌ಮೆಂಟ್ ಮಾದರಿ ಕಾಲನಿಗಳನ್ನು ನಿರ್ಮಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸೋಮವಾರ ಡಾಲರ್ಸ್ ಕಾಲನಿಯಲ್ಲಿರುವ ತನ್ನ ನಿವಾಸದಿಂದ ಶಿವಾಜಿನಗರದ ವರೆಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸಿದ ಯಡಿಯೂರಪ್ಪ ಅನಂತರ ರಿಕ್ಷಾ ಚಾಲಕರ ಜತೆ ಸಂವಾದ ನಡೆಸಿದರು. ರಾಜ್ಯದಲ್ಲಿ 3.5ಲಕ್ಷ ರಿಕ್ಷಾ ಚಾಲಕರಿದ್ದು, ಬೆಂಗಳೂರು ನಗರದಲ್ಲೆ 1.5ಲಕ್ಷ ರಿಕ್ಷಾ ಚಾಲಕರಿದ್ದು, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.
ರಿಕ್ಷಾ ಚಾಲಕರಿಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಚಾಲಕರ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಗೆ ಸೇರಿಸಲಾಗುವುದು. ಆಟೋ ವಿಮಾ ಶುಲ್ಕ ಇಳಿಕೆ ಮಾಡಲಾಗುವುದು. 5ಲಕ್ಷ ರೂ.ವರೆಗೆ ವೈದ್ಯಕೀಯ ವೆಚ್ಚ ಭರಿಸುವ ಕೇಂದ್ರದ ಆಯುಷ್‌ಮಾನ್ ಭವ ಯೋಜನೆಗೆ ರಿಕ್ಷಾ ಚಾಲಕರನ್ನು ಸೇರಿಸಲಾಗುವುದು ಎಂದು ತಿಳಿಸಿದರು.
ಪೊಲೀಸರಿಂದ ರಿಕ್ಷಾ ಚಾಲಕರಿಗೆ ಆಗುತ್ತಿರುವ ಅನಗತ್ಯ ಕಿರುಕುಳ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ರಿಕ್ಷಾ ಚಾಲಕರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಯಡಿಯೂರಪ್ಪ, ಚಾಲಕರಿಗೆ ಅಭಯ ನೀಡಿದರು.
12 ತಾಸು ವಿದ್ಯುತ್: ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಕನಿಷ್ಟ 12 ತಾಸು ವಿದ್ಯುತ್ ಪೂರೈಕೆ ಮಾಡಲಾಗುವುದು. ಹಾಲು ಉತ್ಪಾದಕರ ಕಲ್ಯಾಣಕ್ಕೆ 10,881 ಕೋಟಿ ರೂ.ನಿಧಿಯನ್ನು ಸ್ಥಾಪಿಸಲಾಗುವುದು. ರೈತರ ನೆರವಿಗೆ 3 ಸಾವಿರ ಕೋಟಿ ರೂ.ಆರ್ವತ ನಿಧಿ ಸ್ಥಾಪಿಸಲಾಗುವುದು ಎಂದು ಯಡಿಯೂರಪ್ಪ, ಹೊಸಕೋಟೆಯಲ್ಲಿ ಏರ್ಪಡಿಸಿದ್ದ ಹಾಲು ಉತ್ಪಾದಕರೊಂದಿಗಿನ ಸಂವಾದದಲ್ಲಿ ಭರವಸೆ ನೀಡಿದರು.







