ಲೈಂಗಿಕ ಅಲ್ಪಸಂಖ್ಯಾತರಿಗೆ ರಾಜಕೀಯ ಸ್ಥಾನ ನೀಡಲು ರಾಹುಲ್ ಗಾಂಧಿಗೆ ಅಕ್ಕೈ ಪದ್ಮಶಾಲಿ ಮನವಿ

ಬೆಂಗಳೂರು, ಎ.9: ಲೈಂಗಿಕ ಅಲ್ಪಸಂಖ್ಯಾತರಾದ ನಮಗೂ ರಾಜಕೀಯ ಸ್ಥಾನ ಕಲ್ಪಿಸಲು ಕಾಂಗ್ರೆಸ್ ಪಕ್ಷ ಮುಂದಾಗಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮನವಿ ಮಾಡಿದ್ದಾರೆ.
ಕೆಪಿಸಿಸಿ ಜನಾರ್ಶೀವಾದ ಯಾತ್ರೆ ಅಂಗವಾಗಿ ರವಿವಾರ ನಗರದ ಅರಮನೆ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಮಹಿಳಾ ಸಾಧಕಿಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಕ್ಕೈ ಪದ್ಮಶಾಲಿ, ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದರು.
ಸಂವಿಧಾನದ ಅಡಿ ಲೈಂಗಿಕ ಅಲ್ಪಸಂಖ್ಯಾತರಿಗೆ ನೀಡುವ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು, ನಮಗೆ ಸಂಪೂರ್ಣ ಬೆಂಬಲ ನೀಡಬೇಕು. ಜೊತೆಗೆ ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377 ರದ್ದು ಪಡಿಸಬೇಕು. ಈ ಬಗ್ಗೆ ಕಾಂಗ್ರೆಸ್ ನಿಲುವು ಏನು? ಎಂದು ರಾಹುಲ್‌ಗೆ ಅಕ್ಕೈ ಪದ್ಮಶಾಲಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ರಾಹುಲ್‌ಗಾಂಧಿ, ಒಬ್ಬರ ಖಾಸಗಿ ವಿಚಾರದಲ್ಲಿ ಯಾರು ಸಹ ತಲೆ ಹಾಕುವುದು ಸರಿಯಲ್ಲ. ಎಲ್ಲರ ಏಳಿಗೆಗಾಗಿ ಕಾಂಗ್ರೆಸ್ ದುಡಿಯುತ್ತಿದೆ. ಮುಂದೆ ಲೈಂಗಿಕ ಅಲ್ಪಸಂಖ್ಯಾತರಿಗೂ ರಾಜಕೀಯ ಸ್ಥಾನ ದೊರೆಯಲಿದ್ದು, ಸಮಾಜ ಅವರನ್ನು ಗುರುತಿಸಲಿದೆ ಎಂದಿದ್ದಾರೆ ಎಂದು ಅಕ್ಕೈ ಪದ್ಮಶಾಲಿ ತಿಳಿಸಿದರು.





