ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಬೈರತಿ ಸುರೇಶ್ ರಾಜೀನಾಮೆ

ಬೆಂಗಳೂರು, ಎ. 9: ವಿಧಾನಸಭಾ ಚುನಾವಣೆಯಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿರುವ ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.
‘ನಾನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನನ್ನ ರಾಜೀನಾಮೆಯನ್ನು ನೀಡುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕು’ ಎಂದು ಮೂರು ಸಾಲಿನ ರಾಜೀನಾಮೆ ಪತ್ರವನ್ನು ಸಭಾಪತಿ ಶಂಕರಮೂರ್ತಿಯವರಿಗೆ ಸಲ್ಲಿಸಿದ್ದು, ಬೈರತಿ ಸುರೇಶ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಅವರ ಸದಸ್ಯತ್ವ ಇನ್ನು ಮೂರು ತಿಂಗಳಷ್ಟೇ ಬಾಕಿ ಇತ್ತು ಎಂದು ಗೊತ್ತಾಗಿದೆ. ವಿಧಾನಸಭಾ ಚುನಾವಣೆ ಮೇ 12ಕ್ಕೆ ದಿನಾಂಕ ನಿಗದಿಯಾದ ಹ್ನಿನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮೊದಲೇ ಬೈರತಿ ಸುರೇಶ್ ರಾಜೀನಾಮೆ ನೀಡಿದ್ದು, ಚುನಾವಣಾ ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.
ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದ ಬೈರತಿ ಸುರೇಶ್ ಅವರಿಗೆ ಟಿಕೆಟ್ ಕೈತಪ್ಪಿತ್ತು. ಆ ಬಳಿಕವೂ ಕ್ಷೇತ್ರದ ಜನರೊಂದಿಗೆ ಸಂಪರ್ಕವಿಟ್ಟುಕೊಂಡಿರುವ ಸುರೇಶ್, ಕ್ಷೇತ್ರದಲ್ಲಿ ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬುದು ಅವರ ಬೆಂಬಲಿಗರ ಅಭಿಪ್ರಾಯವಾಗಿದೆ.







