ಹಿಮಾಚಲ ಪ್ರದೇಶ ಪ್ರಪಾತಕ್ಕೆ ಉರುಳಿದ ಶಾಲಾ ಬಸ್: 27 ಮಕ್ಕಳ ಸಹಿತ 30 ಸಾವು

ಧರ್ಮಶಾಲಾ, ಎ. 9: ವಝೀರ್ ರಾಮ್ ಸಿಂಗ್ ಪಠಾನಿಯಾ ಖಾಸಗಿ ಶಾಲೆಯ ಬಸ್ ಸೋಮವಾರ ನುರ್ಪುರ್ ಕ್ಷೇತ್ರದ ಮಲ್ಕ್ವಾಲ್ ಪ್ರದೇಶದಲ್ಲಿ ಆಳವಾದ ಪ್ರಪಾತಕ್ಕೆ ಉರುಳಿ 27 ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 27 ಮಂದಿ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಹಿಮಾಚಲ ಪ್ರದೇಶದ ಸಾರಿಗೆ ಸಚಿವ ಗೋವಿಂದ್ ಸಿಂಗ್ ತಿಳಿಸಿದ್ದಾರೆ.
42 ಸೀಟುಳ್ಳ ಬಸ್ ಮಕ್ಕಳನ್ನು ಮನೆಗೆ ಬಿಡಲು ತೆರಳುತ್ತಿದ್ದ ಸಂದರ್ಭ ರಸ್ತೆ ಕಾಣದೆ ಪ್ರಪಾತಕ್ಕೆ ಉರುಳಿತು. ಬಸ್‌ನಲ್ಲಿ ಒಟ್ಟು ಎಷ್ಟು ಮಕ್ಕಳಿದ್ದರು ಎಂಬುದು ದೃಢಪಟ್ಟಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ.
ನುರ್ಪುರ್‌ನ ಎಸ್‌ಡಿಎಂ ಆಬಿದ್ ಹುಸೈನ್, ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ 20 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದ್ದಾರೆ. ‘‘ಇನ್ನಷ್ಟು ಮೃತದೇಹಗಳು ಪತ್ತೆಯಾಗುವ ಸಾಧ್ಯತೆ ಇದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ. ಹಿಮಾಚಲ ಪ್ರದೇಶ ಸರಕಾರ ಘಟನ ಸ್ಥಳದಲ್ಲಿ ವೈದ್ಯರ ತಂಡವೊಂದನ್ನು ನಿಯೋಜಿಸಿದೆ. ಇದರಲ್ಲಿ ‘‘ಮಕ್ಕಳ ತಜ್ಞರು ಸೇರಿದಂತೆ ಎಲುಬು ಹಾಗೂ ಕಿವಿ-ಮೂಗು-ಗಂಟಲು ತಜ್ಞರು ಹಾಗೂ ಇತರ ವಿಭಾಗದ ವೈದ್ಯರು ತುರ್ತು ಸೇವೆ ನಡೆಸುತ್ತಿದ್ದಾರೆ’’ ಎಂದು ಕಾಂಗ್ರಾದ ಟಂಡಾದಲ್ಲಿರುವ ಡಾ. ಆರ್‌ಪಿಜಿಎಸ್‌ಸಿ ಪ್ರಾಂಶುಪಾಲರು ತಿಳಿಸಿದ್ದಾರೆ.
ಬಸ್‌ನಲ್ಲಿ ಸುಮಾರು 40 ಮಂದಿಯಿದ್ದರು. ಆದರೆ, ಖಚಿತ ಸಂಖ್ಯೆ ಇದುವರೆಗೆ ದೃಢಪಟ್ಟಿಲ್ಲ ಎಂದು ಪೊಲೀಸ್ ಅಧೀಕ್ಷಕ ಸಂತೋಷ್ ಪಾಟಿಯಾಲ್ ಹೇಳಿದ್ದಾರೆ. ‘‘ನಾನು ಘಟನಾ ಸ್ಥಳದಲ್ಲಿದ್ದೇನೆ. ಜೀವ ರಕ್ಷಿಸುವುದು ನನ್ನ ಮೊದಲ ಆದ್ಯತೆ. ಇದನ್ನನುಸರಿಸಿ ಬಸ್‌ನ ಯುಕ್ತತೆ ಹಾಗೂ ಅಪಘಾತಕ್ಕೆ ಕಾರಣಗಳನ್ನು ಪರಿಶೀಲಿಸಲಾಗುವುದು’’ ಎಂದು ಅವರು ಹೇಳಿದ್ದಾರೆ.







