'ಬೀಡಿ ಕಾರ್ಮಿಕರಿಗೆ 6,000ರೂ. ಮಾಸಿಕ ಪಿಂಚಣಿ ನಿಗದಿಗೆ ಒತ್ತಾಯ'
ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ ಮಹಾಸಭೆ

ಉಡುಪಿ, ಎ.9: ಬೀಡಿ ಕಾರ್ಮಿಕರಿಗೆ 6,000 ರೂ. ಮಾಸಿಕ ಪಿಂಚಣಿ ನಿಗದಿ ಪಡಿಸಿ ಜಾರಿಗೊಳಿಸಬೇಕು ಎಂದು ಉಡುಪಿ ಹಿಂದಿ ಪ್ರಚಾರ ಸಮಿತಿ ಸಭಾ ಭವನದಲ್ಲಿ ಇತ್ತೀಚೆಗೆ ನಡೆದ ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ (ಎಐಟಿಯುಸಿ) ಇದರ 73ನೇ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನು ಮತದ ನಿರ್ಣಯ ಅಂಗೀಕರಿಸಲಾಯಿತು.
ಸಂಘದ ಅಧ್ಯಕ್ಷೆ ಶಾಂತಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಅನೇಕ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಕನಿಷ್ಠ ವೇತನ ಪ್ರತಿ ಸಾವಿರ ಬೀಡಿಗೆ 210ರೂ. ಹಾಗೂ ಬೆಲೆ ಏರಿಕೆಗೆ ಅನುಗುಣವಾಗಿ ಏರಿಕೆಯಾದ ತುಟ್ಟಿಭತ್ಯೆ ಪ್ರತಿ ಪಾಯಿಂಟ್‌ಗೆ 4ಪೈಸೆಯಂತೆ ಎ.1ರಿಂದಲೇ ಜಾರಿ ಮಾಡಬೇಕು.
ಬೀಡಿ ಕೈಗಾರಿಕೆಗೆ ಮಾರಕವಾದ ಕೊಟ್ಫಾ ಕಾಯಿದೆ ಮತ್ತು ತಂಬಾಕು ನಿಷೇಧ ಕಾಯಿದೆಯನ್ನು ರದ್ದುಪಡಿಸಬೇಕು. ಒಂದು ಸಾವಿರ ಬೀಡಿಗೆ ರೂ.400 ಕನಿಷ್ಠ ವೇತನ ಪಾಯಿಂಟ್‌ಗೆ 10 ಪೈಸೆ ತುಟ್ಟಿಭತ್ಯೆ ನಿಗದಿ ಪಡಿಸಬೇಕು. ಬೀಡಿ ಕಾರ್ಮಿಕರ ವೆಲ್ಫೇರ್ ಫಂಡ್‌ನಿಂದ ಲಭ್ಯವಿರುವ ಬೀಡಿ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ, ವೈದ್ಯಕೀಯ ಸೌಲಭ್ಯ ಹಾಗೂ ಮನೆ ಕಟ್ಟಲು ನೀಡುತ್ತಿರುವ 1.5 ಲಕ್ಷ ರೂ.ಸಹಾಯಧನವನ್ನು ವಿಳಂಬವಿಲ್ಲದೆ ಅರ್ಹ ಕಾರ್ಮಿಕರಿಗೆ ಸಕಾಲ ದಲ್ಲಿ ನೀಡಬೇಕು ಹಾಗೂ ವೆಲ್‌ಫೇರ್ ಫಂಡ್‌ನ ಉಪಪ್ರಾದೇಶಿಕ ಕಚೇರಿ ಯನ್ನು ಉಡುಪಿ ನಗರದಲ್ಲಿ ತೆರೆಯಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಪ್ರಾರಂಭದಲ್ಲಿ ಕಳೆದೊಂದು ವರ್ಷದಲ್ಲಿ ನಿಧನರಾದ ಹಿರಿಯ ಕಾರ್ಮಿಕ ನಾಯಕರಾದ ಬಿ.ವಿಶ್ವನಾಥ ನಾಯ್ಕಾ, ಪಿ.ಸಂಜೀವ, ಚಂದ್ರಾವತಿ ಭಂಡಾರಿ ಹಾಗೂ ಇತರ ಕಾರ್ಮಿಕ ವರ್ಗದ ಚೇತನಗಳಿಗೆ ಶ್ರದ್ಧಾಂಜಲಿ ಅರ್ಪಿ ಸಲಾಯಿತು. ಎಐಟಿಯುಸಿ ಮುಖಂಡರಾದ ಬಿ.ಶೇಖರ್ ಕಳೆದ ವರ್ಷದ ಚಟುವಟಿಕೆ ಹಾಗೂ ಸಂಘಟನಾ ವರದಿಯನ್ನು ಮತ್ತು ಸಂಘದ ಕೋಶಾಧಿಕಾರಿ ಕೆ.ವಿ.ಭಟ್ ಅವರು ಕಳೆದ ವರ್ಷದ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು.
ಸಭೆಯಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಶಾಂತಾ ನಾಯಕ್ ಅಧ್ಯಕ್ಷರಾಗಿ, ಆನಂದ ಪೂಜಾರಿ, ಸುಮತಿ ಶೆಟ್ಟಿ ಕೋಟ್ನಕಟ್ಟೆ, ರಾಮಮೂಲ್ಯ ಶಿರ್ವ ಉಪಾಧ್ಯಕ್ಷರಾಗಿ, ಶಶಿಕಲಾ ಗಿರೀಶ್ ಪ್ರಧಾನ ಕಾರ್ಯದರ್ಶಿ, ಸಂಜೀವ ಶೇರಿಗಾರ್, ಅಪ್ಪಿ ಶೆಟ್ಟಿಗಾರ್, ವಾರಿಜಾ ನಾಯ್ಕಿ ಆತ್ರಾಡಿ ಮುಂತಾದವರು ಚುನಾಯಿತರಾದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಬೇರಿಂಜ, ದ.ಕ.ಜಿಲ್ಲಾ ಕಟ್ಟಡ ಮತ್ತು ಬೀಡಿ ಕಾರ್ಮಿಕ ಸಂಘದ ಮುಖಂಡರಾದ ಎಂ.ಕರುಣಾಕರ್, ತಿಮ್ಮಪ್ಪ ಕಾವೂರು ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೆ.ವಿ.ಭಟ್ ವಂದಿಸಿದರು.







