ದೇರೇಬೈಲ್: ಅಪಘಾತದ ಗಾಯಾಳು ವಿದ್ಯಾರ್ಥಿನಿ ಮೃತ್ಯು

ಮಂಗಳೂರು, ಎ.9: ನಗರದ ದೇರೆಬೈಲ್ ಚರ್ಚ್ ಸಮೀಪ ಮಾ.25ರಂದು ಕಾರು ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಬಿಜೈ ಕಾಪಿಕಾಡ್ ನಿವಾಸಿ ನಿಶ್ಮಿತಾ ಕುಟಿನ್ಹೋ (16) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ನೊರಿನ್ ಕ್ರಾಸ್ತಾ ಮತ್ತು ಜೆರೋಂ ಕುಟಿನ್ಹೋ ದಂಪತಿಯ ಪುತ್ರಿಯಾಗಿರುವ ನಿಶ್ಮಿತಾ ನಗರದ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಓದುತ್ತಿದ್ದರು.
ಮಾ. 25ರಂದು ಬೆಳಗ್ಗೆ 10:45ರ ವೇಳೆಗೆ ರಸ್ತೆ ಬದಿ ನಿಂತಿದ್ದಾಗ ಬೆಂಗಳೂರಿನ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ನಿಶ್ಮಿತಾರಿಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಕಾರಿನ ಗ್ಲಾಸ್ ನಿಶ್ಮಿತಾರ ತಲೆಗೆ ತಾಗಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ನಿಶ್ಮಿತಾರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, 14 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸುರತ್ಕಲ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





