ಬೈಕಿನಲ್ಲಿ ಗಾಂಜಾ ಸಾಗಾಟ ಆರೋಪ: ಇಬ್ಬರ ಬಂಧನ
ಪುತ್ತೂರು, ಎ. 9: ಬೈಕಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪುತ್ತೂರು ನಗರ ಪೊಲೀಸರು ನಗರದ ಹೊರವಲಯದ ನೆಹರೂ ನಗರದಲ್ಲಿರುವ ಪ್ರಯಾಣಿಕರ ಬಸ್ ತಂಗುದಾಣದ ಬಳಿ ಸೋಮವಾರ ಮಧ್ಯಾಹ್ನ ಪತ್ತೆ ಹಚ್ಚಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಕಬಕ ಗ್ರಾಮದ ಕಲ್ಲಂದಡ್ಕ ನಿವಾಸಿ ಉಮರ್ ಫಾರೂಕ್ (33) ಮತ್ತು ಕೊಡಿಪ್ಪಾಡಿ ನಿವಾಸಿ ಮಹಮ್ಮದ್ ತೌಫೀಕ್ (25) ಬಂಧಿತ ಆರೋಪಿಗಳು. ಪೊಲೀಸರು ಆರೋಪಿಗಳ ಬಳಿ ಇದ್ದ 350 ಗ್ರಾಂ ಗಾಂಜಾವನ್ನು, ಸಾಗಾಟಕ್ಕೆ ಬಳಸಿದ ಬೈಕ್ ಸಮೇತ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಗಾಂಜಾದ ಮೌಲ್ಯ ರೂ.15 ಸಾವಿರ ಮತ್ತು ಬೈಕಿನ ಮೌಲ್ಯ ರೂ.40 ಸಾವಿರ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಬ್ಬರು ಬೈಕೊಂದರಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಕುರಿತು ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಪುತ್ತೂರು ನಗರ ಠಾಣೆಯ ಇನ್ಸ್ಪೆಕ್ಟರ್ ಶರಣ ಗೌಡ ಅವರ ಮಾರ್ಗದರ್ಶನದಲ್ಲಿ ಎಸ್ಐ .ಅಜೇಯ್ಕುಮಾರ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.