ಉಡುಪಿ: ಮತದಾನಕ್ಕೆ ಬರಲು ಯಾರು ಕರೆಯುತಿದ್ದಾರೆ ನೋಡಿ.....

ಉಡುಪಿ, ಎ.9: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರನ್ನು ಮತಗಟ್ಟೆಗೆ ಕರೆಯಲು ಜಿಪಂ ಸಿಇಒ ಶಿವಾನಂದ ಕಾಪಶಿ ಅಧ್ಯಕ್ಷತೆಯ ಜಿಲ್ಲಾ ಸ್ಪೀಪ್ ಸಮಿತಿ ಕಂಡುಕೊಂಡ ಸರಳ ಉಪಾಯ ನಮ್ಮ- ನಿಮ್ಮ ನಡುವಿರುವ ಜನಸಾಮಾನ್ಯರು.
ಹೌದು. ಜಿಲ್ಲೆಯ ಜನಸಾಮಾನ್ಯರಲ್ಲಿ ಮತದಾನದ ಕುರಿತಂತೆ ಜಾಗೃತಿ ಮೂಡಿಸಲು, ಅರಿವು ನೀಡಲು ಸ್ವೀಪ್ ಸಮಿತಿ ಇಂದು ಬಿಡುಗಡೆಗೊಳಿಸಿದ ಒಟ್ಟು 17 ಭಿತ್ತಿಪತ್ರಗಳು, ನಮ್ಮ-ನಿಮ್ಮ ಗ್ರಾಮಗಳಲ್ಲಿ ಪ್ರತಿದಿನ ನಿಮ್ಮೆದುರೇ ಇರುವ ವಿವಿಧ ವೃತ್ತಿಯ, ವಿವಿಧ ಸಮಾಜಗಳ ಸಾಮಾನ್ಯರನ್ನೇ ರೂಪದರ್ಶಿ ಗಳನ್ನಾಗಿ ಬಳಸಿಕೊಂಡಿದೆ.
ಸ್ಥಳೀಯ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಕಣ್ಣಿಗೆ ಹಿತ ನೀಡುವ ಬಣ್ಣದ ಚಿತ್ರ ಹಾಗೂ ಘೋಷವಾಕ್ಯಗಳನ್ನು ಹೊಂದಿರುವ ಈ ಪೋಸ್ಟರ್ಸ್ ಹಾಗೂ ಹೋರ್ಡಿಂಗ್ಸ್ ಡಿಸೈನ್‌ಗಳನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಬಿಡುಗಡೆಗೊಳಿಸಿದರು.
ಈ ಪೋಸ್ಟರ್‌ಗಳಲ್ಲಿ ರೈತರು, ಗದ್ದೆ ಕೆಲಸದಲ್ಲಿ ನಿರತರಾದ ಮಹಿಳೆಯರು, ಮೀನುಗಾರ ಮಹಿಳೆ, ಕೊರಗ ದಂಪತಿಗಳು, ಕೂಲಿಕಾರ್ಮಿಕರು, ಹಿರಿಯ ನಾಗರಿಕರು, ಕೈಕಸುಬಿನಲ್ಲಿ ನಿರತರಾದ ಮಹಿಳೆಯರು, ಯುವ ಜನತೆ ರೂಪದರ್ಶಿಗಳಾಗಿದ್ದು, ಎಲ್ಲರೂ ಮೇ 12ರಂದು ಮತದಾನವನ್ನು ತಪ್ಪದೇ ಮಾಡುವಂತೆ ಬೇರೆ ಬೇರೆ ರೀತಿಯಲ್ಲಿ ನೆನಪಿಸುತಿದ್ದಾರೆ.
ಸ್ವೀಪ್ ಸಮಿತಿಯಡಿ ನಿರ್ಮಾಣಗೊಂಡ ಈ ಚಿತ್ರಗಳು ಅತ್ಯಾಕರ್ಷಕವಾಗಿವೆ. ಚಿತ್ರಕ್ಕೆ ಬಳಸಲಾದ ಘೋಷ ವಾಕ್ಯಗಳೂ ಸಹ ಆಯಾ ಪ್ರದೇಶದ ಆಡುಭಾಷೆಯ ಸೊಗಡನ್ನು ಹೊಂದಿವೆ. ತುಳು ಆಡು ಮಾತಿನ, ಕುಂದಾಪ್ರ ಆಡುಬಾಷೆಯ ಸೊಗಡನ್ನು ಕೆಲವು ಘೋಷ ವಾಕ್ಯಗಳು ಒಳಗೊಂಡಿವೆ. ಸ್ವೀಪ್ ಸಮಿತಿ ಅಧ್ಯಕ್ಷ ಶಿವಾನಂದ ಕಾಪಶಿ ಮತ್ತು ಸಮಿತಿಯಲ್ಲಿರುವ ಪಿಡಿಒಗಳಾದ ಮಹೇಶ್ ಹಾಗೂ ಪ್ರಮೀಳಾ ಈ ಪೋಸ್ಟರ್‌ಗಳ ಹಿಂದಿರುವ ರೂವಾರಿಗಳು.
‘ಪ್ರತಿ ಹೆಜ್ಜೆಗೂ ಬೇಕು ಎಚ್ಚರಿಕೆ, ಪ್ರತಿ ಮತವೂ ಮುಖ್ಯ ಬನ್ನಿ ಮತದಾನಕ್ಕೆ’, ‘ಕನಸು, ವಿಕಾಸ, ಸುರಕ್ಷತೆಗಾಗಿ ನಮ್ಮ ಮತದಾನ’, ‘ಸಂತಸದಿ ಮತದಾನಕ್ಕೆ ತಯಾರಾಗಿ’, ‘ಕತ್ತಲಿನಿಂದ ಬೆಳಕಿನೆಡೆಗೆ ಮತದಾನದಿಂದ ಮಂದಹಾಸದೆಡೆಗೆ’, ‘ಎಂಥ ಕೆಲ್ಸಿದ್ರೂ ವೋಟ್ ಹಾಕೂದೊಂದು ಮರೂಕಾಗ’, ‘ಓಟ್ ಪಾಡೆರೆ ಉಂಡು, ಬೇಗ ಪೋಯಿಯೇ?’ ಮುಂತಾದ ಅರ್ಥಗರ್ಭಿತ ಘೋಷವಾಕ್ಯ ಹಾಗೂ ಚಿತ್ರಗಳನ್ನೊಳಗೊಂಡ ಪೋಸ್ಟರ್‌ಗಳು ಮತದಾನದ ಜಾಗೃತಿಯಲ್ಲಿ ಪರಿಣಾಮಕಾರಿಯಾಗಲಿವೆ ಎಂಬ ಬಗ್ಗೆ ಶಿವಾನಂದ ಕಾಪಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಮಾತ್ರ ನಾವು ಮತದಾನ ಜಾಗೃತಿಗಾಗಿ ಸ್ಥಳೀಯ ಸಂಸ್ಕೃತಿ, ಜನರನ್ನು ಬಳಸಿಕೊಂಡಿದ್ದೇವೆ. ಎಲ್ಲಾ ಪೋಟೊಗಳು ಸ್ವಾಭಾವಿಕವಾಗಿ ಬರುವಂತೆ, ಎಲ್ಲೂ ಕೃತಕೃತತೆ ಎನಿಸದಂತೆ ತುಂಬಾ ಜಾಗೃತೆ ವಹಿಸಿದ್ದೇವೆ. ಎಲ್ಲಾ ಪೋಟೊಗಳನ್ನು ಅವರವರ ಸ್ಥಳಗಳಿಗೇ ಹೋಗಿ, ಎಲ್ಲರೂ ವೃತ್ತಿಯಲ್ಲಿ ನಿರತರಾಗಿದ್ದಾಗಲೇ ತೆಗೆಯಲಾಗಿದೆ. ಹೀಗಾಗಿ ಎಲ್ಲವೂ ಅತ್ಯಂತ ನೈಜವಾಗಿ ಮೂಡಿ ಬಂದಿದೆ ಎಂದು ಕಾಪಶಿ ಹೇಳಿದರು.












