ಸೌಜನ್ಯ ಪ್ರಕರಣ: ಸಿಬಿಐ ತನಿಖೆ ಕುರಿತು ಹೈಕೋರ್ಟ್ ಅಸಮಾಧಾನ

ಬೆಂಗಳೂರು, ಎ.9: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂಬಂಧ ಸಿಬಿಐ ತನಿಖೆ ಬಗ್ಗೆ ಹೈಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.
ದೋಷಾರೋಪ ಪಟ್ಟಿಯಲ್ಲಿ ಸಾಕ್ಷಿಗಳ ಹೇಳಿಕೆ ದಾಖಲಿಸದಿರುವುದಕ್ಕೆ ಕಾರಣವೇನೆಂದು ತನಿಖಾಧಿಕಾರಿಗಳಿಂದ ಮಾಹಿತಿ ಪಡೆದು ಕೋರ್ಟ್‌ಗೆ ಒದಗಿಸುವಂತೆ ಸಿಬಿಐ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ. ಅರ್ಜಿಯ ವಿಚಾರಣೆಯನ್ನು ಕೋರ್ಟ್ ಎ.17್ಕಕೆ ಮುಂದೂಡಿದೆ.
ಪ್ರಕರಣವೇನು? 2012ರ ಅ. 9 ರಂದು ಸಂಜೆ ಕಾಲೇಜಿನಿಂದ ಮನೆಗೆ ಹೊರಟ ಧರ್ಮಸ್ಥಳ ಕ್ಷೇತ್ರದ ಬಳಿಯ ಪಾಂಗಾಳದ, ಚಂದಪ್ಪಗೌಡ ಕುಸುಮಾವತಿ ದಂಪತಿ ಪುತ್ರಿ ಸೌಜನ್ಯಾ (17) ಮನೆಗೆ ಹೋಗಲೇ ಇಲ್ಲ. ರಾತ್ರಿಯಾದರೂ ಮನೆಗೆ ಬಾರದ ಪುತ್ರಿಯನ್ನು ಮನೆಯವರು ರಾತ್ರಿಯಿಡೀ ಹುಡುಕಿದರೂ ಸಿಗಲಿಲ್ಲ.
ಮರುದಿನ ಬೆಳಗ್ಗೆಯೂ ಹುಡುಕಾಟ ಮುಂದುವರಿಸಿದಾಗ ಮಧ್ಯಾಹ್ನದ ವೇಳೆಗೆ ನೇತ್ರಾವತಿ ಸ್ನಾನ ಘಟ್ಟದಿಂದ ಅನತಿ ದೂರದಲ್ಲಿ ಮುಖ್ಯ ರಸ್ತೆಯಿಂದ ಬಲ ತಿರುವು ಮೂಲಕ ಪಾಂಗಾಳಕ್ಕೆ ಹೋಗುವ ರಸ್ತೆ ಬದಿಯ ಕಾಡಿನಲ್ಲಿ ಶವ ಸಿಕ್ಕಿತು. ಮನೆಯಲ್ಲಿನ ಹೊಸ ಅಕ್ಕಿ ಊಟವನ್ನು ನೆನೆದುಕೊಂಡು ಹೊರಟಿದ್ದ ಬಾಲೆ ದುರುಳರ ಕಾಮಪಿಪಾಸೆಗೆ ಬಲಿಯಾಗಿದ್ದಳು.





