ಎನ್‌ಐಎ ವಾಂಟೆಡ್ ಪಟ್ಟಿಯಲ್ಲಿ ಪಾಕ್ ರಾಜತಾಂತ್ರಿಕ

ಹೊಸದಿಲ್ಲಿ, ಎ.9: ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸುವ ಸಂಚು ಹೂಡಿದ ಆರೋಪದಡಿ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ‘ವಾಂಟೆಡ್’ ಪಟ್ಟಿಗೆ ಸೇರಿಸಿದೆ. ಅಮೀರ್ ಝುಬೇರ್ ಸಿದ್ದಿಕಿಯನ್ನು ತನ್ನ ‘ವಾಂಟೆಡ್’ ಪಟ್ಟಿಗೆ ಸೇರಿಸಿಕೊಂಡಿರುವ ಎನ್‌ಐಎ ಆತನ ಫೋಟೋ ಪ್ರಕಟಿಸಿ ಮಾಹಿತಿಯನ್ನು ಕೋರಿದೆ. ಅಲ್ಲದೆ ಆತನ ವಿರುದ್ಧ ಇಂಟರ್‌ಪೋಲ್ ನೋಟಿಸ್ ಜಾರಿಗೆ ಕೋರಿಕೆ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
2014ರಲ್ಲಿ ಶ್ರೀಲಂಕಾದಲ್ಲಿ ಪಾಕ್ ಹೈಕಮಿಷನ್ ಕಚೇರಿಯಲ್ಲಿ ವೀಸಾ ಕೌನ್ಸೆಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಸಿದ್ದಿಕಿ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಹಾಗೂ ಭಾರತದಲ್ಲಿರುವ ಅಮೆರಿಕ ಮತ್ತು ಇಸ್ರೇಲ್ ದೂತಾವಾಸಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಫೆಬ್ರವರಿಯಲ್ಲಿ ಎನ್‌ಐಎ ಸಲ್ಲಿಸಿದ್ದ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
2014ರಲ್ಲಿ ಸಿದ್ದಿಕಿಯ ಸಂಚು ಬಯಲಾದ ಬಳಿಕ ಭಾರತವು ಶ್ರೀಲಂಕಾ ಸರಕಾರದ ಮೇಲೆ ಒತ್ತಡ ಹೇರಿದ ಕಾರಣ ಆತನನ್ನು ಪಾಕ್‌ಗೆ ವಾಪಸ್ ಕಳಿಸಲಾಗಿತ್ತು. ಸಿದ್ದಿಕಿಗೆ ಶ್ರೀಲಂಕಾದ ನಿವಾಸಿ ಶಾಕಿರ್ ಹುಸೇನ್ ಎಂಬಾತ ನೆರವಾಗಿದ್ದ. ಈತನನ್ನು 2014ರಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದು ಈಗ ಸೆರೆಯಲ್ಲಿದ್ದಾನೆ. ಸಿದ್ದಿಕ್ ಚೆನ್ನೈಯಲ್ಲಿರುವ ಅಮೆರಿಕ ದೂತಾವಾಸ ಹಾಗೂ ಬೆಂಗಳೂರಿನಲ್ಲಿರುವ ಇಸ್ರೇಲ್ ದೂತಾವಾಸದ ಬೇಹುಗಾರಿಕೆ ನಡೆಸುವ ಕಾರ್ಯವನ್ನು ಹುಸೈನ್‌ಗೆ ವಹಿಸಿದ್ದು ಈ ಎರಡೂ ದೂತಾವಾಸಗಳ ಮೇಲೆ 26/11 ಮಾದರಿಯ ದಾಳಿ ನಡೆಸುವ ಸಂಚನ್ನು ಹೂಡಲಾಗಿತ್ತು. ಈ ಕಾರ್ಯದಲ್ಲಿ ನೆರವಾಗಲು ಮಾಲ್ದೀವ್ಸ್‌ನ ಇಬ್ಬರು ಭಯೋತ್ಪಾದಕರನ್ನು ಭಾರತಕ್ಕೆ ಕಳಿಸಲಾಗುವುದು ಎಂದು ಸಿದ್ದಿಕ್ ಭರವಸೆ ನೀಡಿದ್ದ ಎಂದು ಹುಸೈನ್ ಪೊಲೀಸರಲ್ಲಿ ಬಾಯಿಬಿಟ್ಟಿದ್ದ. ಈ ನಿಟ್ಟಿನಲ್ಲಿ ಅಮೆರಿಕ ನೀಡಿದ್ದ ಹಲವು ಮಹತ್ವದ ಮಾಹಿತಿಗಳು ಭಾರತಕ್ಕೆ ನೆರವಾಗಿದೆ ಎಂದು ಮೂಲಗಳು ತಿಳಿಸಿವೆ.







