ರಾಜ್ಯದಲ್ಲಿ ರಜನಿ, ಕಮಲ್ ಚಿತ್ರಗಳ ನಿಷೇಧ: ಅನಂತ್‌ನಾಗ್ ಬೆಂಬಲ

ಬೆಂಗಳೂರು, ಏ.10: ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡಿನ ಖ್ಯಾತ ಚಿತ್ರನಟರಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು ನೀಡುತ್ತಿರುವ ಪ್ರಚೋದನಾಕಾರಿ ಹೇಳಿಕೆಗೆ ಕನ್ನಡದ ಹಿರಿಯ ಚಿತ್ರನಟ ಅನಂತ್ ನಾಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಇಬ್ಬರು ನಟರ ಚಲನಚಿತ್ರಗಳ ನಿಷೇಧಕ್ಕೆ ಬೆಂಬಲ ನೀಡುವುದಾಗಿಯೂ ಘೋಷಿಸಿದ್ದಾರೆ.
ಮಂಗಳವಾರ ಸುದ್ದಿವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ರಜನಿ, ಕಮಲ್ ಅವರೊಂದಿಗೆ ವೈಯಕ್ತಿಕ ಸಂಧಾನದ ಸಮಯ ಮುಗಿದಿದೆ. ಸಿನಿಮಾ ರಂಗದಲ್ಲಿ ಖ್ಯಾತರಾಗಿರುವ ಈ ಇಬ್ಬರು ನಟರು ರಾಜಕೀಯ ರಂಗ ಪ್ರವೇಶಿಸಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಇವರು ಕಾವೇರಿ ವಿಷಯದಲ್ಲಿ ಕ್ಷುಲ್ಲಕ ಮತ್ತು ಹೊಲಸು ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ, ಅವರ ಸಿನಿಮಾಗಳ ನಿಷೇಧಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.
ಕನ್ನಡ ನಾಡಿನ ನೆಲ, ಜಲ, ಭಾಷೆ ಮತ್ತು ಹಿರಿಮೆ ರಕ್ಷಣೆಗೆ ಕನ್ನಡದ ಸಮಸ್ತ ಜನತೆ ಜೊತೆ ನಾನಿದ್ದೇನೆ ಎಂದು ಹೇಳಿರುವುದು ಕನ್ನಡಪರ ಹೋರಾಟಗಾರರಲ್ಲಿ ಹುರುಪು ಮೂಡಿಸಿದೆ. ಕಾವೇರಿ ನದಿ ನೀರು ವಿಷಯದಲ್ಲಿ ತಮಿಳುನಾಡು ರಾಜಕಾರಣಿಗಳು ಚಲನಚಿತ್ರ ನಟರು ಅಸಹಕಾರ, ಘರ್ಷಣೆ ನಿಲುವನ್ನು ತಳೆದಿದ್ದಾರೆ. ಈಗ ತಮಿಳುನಾಡು ಬಂದ್ ಮಾಡುವ ಮೂಲಕ ಜನರನ್ನು ಪ್ರಚೋದಿಸಿ ಕರ್ನಾಟಕದ ವಿರುದ್ದ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ.
ರಜನಿಕಾಂತ್, ಕಮಲ್ ಹಾಸನ್‌ರಂಥ ಹಿರಿಯ ನಟರು ಇಂಥ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದಕ್ಕೂ ಮುನ್ನ ವಿವೇಕದಿಂದ ವರ್ತಿಸಬೇಕು. ಇಬ್ಬರ ರಾಜಕೀಯ ಪ್ರವೇಶ ಸ್ವಾಗತಾರ್ಹ. ಆದರೆ, ಅವರ ನಿಲುವು ಹಾಗೂ ಪ್ರಚೋದನಾಕಾರಿ ಹೇಳಿಕೆಗಳ ವಿರುದ್ದ ಅನಂತ್‌ನಾಗ್ ಹರಿಹಾಯ್ದಿದ್ದಾರೆ.







