ಬೆಳ್ತಂಗಡಿ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು, ಕಾನೂನು ಕ್ರಮಕ್ಕೆ ಒತ್ತಾಯ
ಭೂತ ಕಟ್ಟುವವರನ್ನು ನಿಂದಿಸಿದ ಆರೋಪ

ಬೆಳ್ತಂಗಡಿ, ಎ. 10: ಮಂಗಳೂರಿನ ಕೈರಂಗಳದಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಭೂತ ಕಟ್ಟುವವನಿಗೆ ತಲೆ ಸರಿ ಇಲ್ಲ ಎಂದು ಸಾರ್ವಜನಿಕವಾಗಿ ನಿಂದಿಸಿ, ಅವಮಾನಿಸಿರುವ ಕ್ರಮ ದಲಿತ ದೌರ್ಜನ್ಯ ತಡೆ ಕಾಯ್ದೆ 1989 ರಂತೆ ಅಪರಾಧವಾಗಿದ್ದು, ತಕ್ಷಣ ಕಲ್ಲಡ್ಕ ಭಟ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ, ಜೈಲಿಗಟ್ಟಬೇಕು ಎಂದು ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ನಿಕಟ ಪೂರ್ವಾಧ್ಯಕ್ಷ ಸೇಸಪ್ಪ ನಲಿಕೆ ಒತ್ತಾಯಿಸಿದ್ದಾರೆ.
ಅವರು ಮಂಗಳವಾರ ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶತಮಾನಗಳಿಂದ ನಿರಂತರವಾಗಿ ಶೋಷಣೆಗೊಳಗಾಗಿರುವ ದಲಿತ ಸಮುದಾಯವನ್ನು ಸಂಘ ಪರಿವಾರ ನಾವೆಲ್ಲಾ ಒಂದೇ ಎಂದು ಹೇಳಿ ಮತ್ತಷ್ಟು ಶೋಷಣೆಗೊಳಪಡಿಸುತ್ತಿರುವ ಘಟನೆಗಳು ನಿತ್ಯ ನಿರಂತರವಾಗಿ ನಡೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ಹೊರಬಿದ್ದಿದೆ. ಇದು ಪೂರ್ವಯೋಜಿತ, ವ್ಯವಸ್ಥಿತವಾದುದು. ಆ ಮೂಲಕ ಆರ್‌ಎಸ್‌ಎಸ್‌ನ ನಿಜ ಬಣ್ಣ ಬಯಲಾಗಿದೆ ಎಂದ ಅವರು, ದೈವ ನರ್ತಕರಿಗೆ ತಲೆ ಸರಿ ಇಲ್ಲ ಎಂದು ಹೇಳುವ ಕಲ್ಲಡ್ಕ ಪ್ರಭಾಕರ್ ಭಟ್ ಗೆ ನಿಜವಾಗಿಯೂ ತಲೆ ಸರಿ ಇಲ್ಲ. ಅವರು ಮಾನಸಿಕರಂತೆ ಮಾತನಾಡುತ್ತಾ, ನಾಡಿನಾದ್ಯಂತ ಹಲವಾರು ಕೋಮು ಸಂಘರ್ಷಗಳಿಗೆ ಕಾರಣವಾಗಿ ಕ್ರಿಮಿನಲ್ ಕೇಸುಗಳನ್ನು ಹಾಕಿಸಿಕೊಂಡಿರುವ ಓರ್ವ ಅಪ್ಪಟ ಕ್ರಿಮಿನಲ್. ಅಂತಹವರಿಗೆ ದೈವ ನರ್ತಕರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ. ಕ್ರಿಮಿನಲ್‌ಗಳಿಂದ ಪಾಠ ಕಲಿಯುವ ಅಗತ್ಯವೂ ದೈವ ನರ್ತಕ ಸಮುದಾಯಕ್ಕಿಲ್ಲ. ದೈವ ನರ್ತಕರು ಜಾತ್ಯಾತೀತ ಮನಸ್ಸುಳ್ಳವರು. ದೈವ ನರ್ತನ ಸಂದರ್ಭದಲ್ಲಿ ಯಾರೇ ಬಂದರೂ ಭಕ್ತಿಯಿಂದ ಪ್ರಸಾದ ನೀಡುವುದು ತುಳುನಾಡಿನ ಸಂಪ್ರದಾಯ. ಭಟ್ಟರಂತಹ ಕೋಮುವಾದಿ ಶಕ್ತಿಗಳು ಇಂತಹ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಅವರ ಕೀಳು ಮಟ್ಟದ ರಾಜಕೀಯಕ್ಕೆ ಸಾಕ್ಷಿ ಎಂದರು.
ದೈವಸ್ಥಾನ, ದೇವಸ್ಥಾನಗಳಿಗೆ ಸಚಿವ ಯು.ಟಿ.ಖಾದರ್ ಬಂದಿದ್ದರೆ ಅಂತಹ ದೈವಸ್ಥಾನ, ದೇವಸ್ಥಾನಗಳಿಗೆ ಮತ್ತೊಮ್ಮೆ ಬ್ರಹ್ಮಕಲಶ ಮಾಡಲು ಕರೆ ಕೊಡುವ ಪ್ರಭಾಕರ ಭಟ್ಟ್ ತನ್ನ ನೇತೃತ್ವದಲ್ಲಿರುವ ಕಲ್ಲಡ್ಕದ ಶ್ರೀರಾಮ ಮಂದಿರಕ್ಕೂ ಮುಸ್ಲಿಂಮರು ಶ್ರದ್ಧಾ ಭಕ್ತಿಯಿಂದ ಹೋಗಿದ್ದಾರೆ. ಮೊದಲು ಕಲ್ಲಡ್ಕ ಭಟ್ ಶ್ರೀರಾಮ ಮಂದಿರಕ್ಕೆ ಬ್ರಹ್ಮಕಲಶ ಮಾಡಲಿ. ಅವರು ಚುನಾವಣಾ ನೀತಿ ಸಂಹಿತೆಯನ್ನು ಬಹಿರಂಗವಾಗಿ ಪ್ರಶ್ನಿಸುವ ಮೂಲಕ ಚುನಾವಣಾ ಆಯೋಗವನ್ನು ಕೂಡ ತನ್ನ ಕಪಿಮುಷ್ಠಿಯಲ್ಲಿಡಲು ಪ್ರಯತ್ನಿಸುವ ಆರ್‌ಎಸ್‌ಎಸ್‌ನ ನಿಜ ಬಣ್ಣವನ್ನು ಬಯಲುಗೊಳಿಸಿದ್ದಾರೆ. ಇಂತಹ ಹುಚ್ಚು ಮನಸ್ಸಿನ ಸಂವಿಧಾನ ವಿರೋಧಿಯಾದ ಹೇಳಿಕೆ ನೀಡಿದ ಕಲ್ಲಡ್ಕ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಜೈಲುಗಟ್ಟುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು. ತಪ್ಪಿದ್ದಲ್ಲಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳೊಂದಿಗೆ ಸೇರಿಕೊಂಡು ತೀವ್ರ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.
ಅಧ್ಯಕ್ಷಎಸ್ ಪ್ರಭಾಕರ ಶಾಂತಿಕೋಡಿ ಮಾತನಾಡಿ, ದ.ಕ.ಜಿಲ್ಲೆ ಬುದ್ದಿವಂತರ ಜಿಲ್ಲೆ ಎಂದು ಪ್ರಸಿದ್ಧವಾದುದು. ಆದರೆ ಕಲ್ಲಡ್ಕ ಪ್ರಭಾಕರ್ ಭಟ್ ರಂತಹ ಸಂಕುಚಿತ ಮನಸ್ಸಿನವರಿಂದಾಗಿ ಈ ಜಿಲ್ಲೆಗೆ ಕಳಂಕ ಬರುತ್ತಿದೆ. ಅವರು ರಾಜಕೀಯ ಮಾಡಲಿ. ಆದರೆ ಒಂದು ಸಮುದಾಯದ ಕುರಿತು ಕೀಳು ಮಟ್ಟದ ಹೇಳಿಕೆ ಬೇಕಾಗಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಶ್ಯಾಮ್ ಸುಂದರ್ ಬೆಳ್ತಂಗಡಿ, ದೈವ ನರ್ತಕ ಜನಾರ್ಧನ ಬಳ್ಳಮಂಜ, ಯುವ ವೇದಿಕೆ ಅಧ್ಯಕ್ಷ ಹರೀಶ್ ನಾವೂರು, ಉಪಾಧ್ಯಕ್ಷ ರಾಮ್ ಶಿಶಿಲ, ಸದಸ್ಯರಾದ ವಿನಯ ಕುಮಾರ್ ಎರುಕಡಪು, ಸೀತಾರಾಮ ಇದ್ದರು.
ಮಂಗಳೂರಿನ ಕೈರಂಗಳದಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬೂತ ಕಟ್ಟುವವನಿಗೆ ತಲೆ ಸರಿ ಇಲ್ಲ ಎಂದು ಸಾರ್ವಜನಿಕವಾಗಿ ನಿಂದಿಸಿ, ಅವಮಾನಿಸಿರುವುದನ್ನು ಖಂಡಿಸಿ, ಭಟ್ ವಿರುದ್ಧ ಕೇಸು ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಮಂಗಳವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿ, ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.







