ಎನ್.ಆರ್.ರಮೇಶ್‌ಗೆ ಕೈತಪ್ಪಿದ ಟಿಕೆಟ್: ಸಾಮೂಹಿಕ ರಾಜೀನಾಮೆಗೆ ಬಿಜೆಪಿ ಕಾರ್ಯಕರ್ತರ ನಿರ್ಧಾರ

ಬೆಂಗಳೂರು, ಎ. 10: ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಸೇರಿದಂತೆ ಅವರ ಯಡಿಯೂರು ವಾರ್ಡ್‌ನ ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ.
ಎನ್.ಆರ್.ರಮೇಶ್ ಅವರು ಕೂಡಲೇ ಬಿಜೆಪಿಗೆ ರಾಜೀನಾಮೆ ನೀಡಿ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು. ನಿಮ್ಮನ್ನು ಗೆಲ್ಲಿಸಿ ನಮ್ಮ ತಾಕತ್ತೇನೆಂದು ಅಶೋಕ್ ಅವರಿಗೆ ಸಾಬೀತುಪಡಿಸುತ್ತೇವೆ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಎನ್.ಆರ್.ರಮೇಶ್, ಪಕ್ಷ ತೊರೆಯುವ ಬೆದರಿಕೆ ಹಾಕಿದ್ದರು. ಈ ಬಗ್ಗೆ ವಿಷಯ ತಿಳಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಮೇಶ್ ಅವರನ್ನು ಕರೆಸಿಕೊಂಡು ಸಮಾಧಾನಪಡಿಸಿದ್ದರು. ಚಾಮರಾಜಪೇಟೆ ಅಥವಾ ಗಾಂಧಿನಗರ ಕ್ಷೇತ್ರದ ಟಿಕೆಟ್ ಕೊಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ರಮೇಶ್ ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆಂದು ಹೇಳಿದ್ದರು. ಹೀಗಾಗಿ ಇಂದು ರಮೇಶ್ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದು, ಯಾವುದೇ ಕಾರಣಕ್ಕೂ ಮಣಿಯಬೇಡಿ ಎಂದು ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಮೊದಲು ನಿಮಗೆ ಆಗಿರುವ ಅನ್ಯಾಯವನ್ನು ತಕ್ಷಣ ಸರಿಪಡಿಸಬೇಕು. ಇಲ್ಲದಿದ್ದರೆ ಎಲ್ಲ ಕಾರ್ಯಕರ್ತರು ರಾಜೀನಾಮೆ ನೀಡುತ್ತಾರೆಂದು ಹೇಳಿದ್ದಾರೆ. ನೀವು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಿರಿ. ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಬೆಂಬಲಿಗರ ಒತ್ತಡದಿಂದ ಎನ್.ಆರ್.ರಮೇಶ್ ಅಡಕತ್ತರಿಯಲ್ಲಿ ಸಿಲುಕಿದ್ದು, ಮುಂದೇನು ಮಾಡಬೇಕೆಂದು ನಿರ್ಧಾರ ಕೈಗೊಳ್ಳಲಾಗದೆ ಗೊಂದಲಕ್ಕೀಡಾಗಿದ್ದಾರೆ. ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಬಂಡಾಯದ ಬೇಗುದಿ, ಅಸಮಾಧಾನ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ.







