ಬೆಂಗಳೂರು: ವಾಟ್ಸಾಪ್ ಬೆಡಗಿ ಸುರೇಶ್ ರಾವ್ ಬಂಧನ

ಬೆಂಗಳೂರು, ಎ.10: ಡೇಟಿಂಗ್ ವೆಬ್‌ಸೈಟ್ ಬಳಸಿಕೊಂಡು, ವಾಟ್ಸಾಪ್ ಮೂಲಕ ಯುವತಿಯರಂತೆ ನಟಿಸಿ ಸಂದೇಶಗಳನ್ನು ಕಳುಹಿಸಿ, ಆನ್‌ಲೈನ್‌ನಲ್ಲಿ ಹಣ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಸುರೇಶ್ ರಾವ್ ಎಂಬಾತನನ್ನು ಸಿಸಿಬಿ ಘಟಕದ ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಸುರೇಶ್ ರಾವ್(25) ವೈಟ್‌ಫೀಲ್ಡ್‌ನ ವಿನಾಯಕ ಲೇಔಟ್ ಇಮ್ಮಡಿಹಳ್ಳಿ ಮುಖ್ಯ ರಸ್ತೆಯ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಡೇಟಿಂಗ್ ವೆಬ್‌ಸೈಟ್‌ನಲ್ಲಿ ಹುಡುಗಿಯ ಹೆಸರಿನಲ್ಲಿ ನೋಂದಣಿಯಾಗಿ ಯುವಕರನ್ನು ಸಂಪರ್ಕಿಸಿ ವಾಟ್ಸಾಪ್ ಮೂಲಕ ಸಂದೇಶಗಳನ್ನು ರವಾನಿಸಿ ಖಾಸಗಿಯಾಗಿ ಭೇಟಿಯಾಗುವುದಾಗಿ ನಂಬಿಸಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿಸಿಕೊಂಡ ನಂತರ ಸಂಕರ್ಪ ಕಡಿತಗೊಳಿಸಿಕೊಂಡು ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ದೂರು ದಾಖಲು ಮಾಡಲಾಗಿತ್ತು.
2017ರ ಅಕ್ಟೋಬರ್ 10 ರಂದು ವ್ಯಕ್ತಿಯೊಬ್ಬರು ತಮ್ಮ ಪುತ್ರನ ಖಾತೆಯಿಂದ 71 ಸಾವಿರ ರೂ. ಹಣ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿರುವುದಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಸುರೇಶ್ ರಾವ್, ಶಿಲ್ಪಾ, ಸೋನಿಯಾ ಜೈನ್, ಮನೀಶಾ ಸೇರಿದಂತೆ ಇನ್ನಿತರೆ ಹೆಸರುಗಳಿಂದ ಬರೋಬ್ಬರಿ 12ಕ್ಕೂ ಹೆಚ್ಚು ಯುವಕರನ್ನು ವಂಚಿಸಿರುವುದಾಗಿ ಹಾಗೂ www.freedating.com, freedatingapp ಮೂಲಕ ವಂಚನೆ ಮಾಡುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ.







