ಬಂತು ಕಾಂಗ್ರೆಸ್ ಅಭ್ಯರ್ಥಿಗಳ ಫೇಕ್ ಪಟ್ಟಿ!
ಯಾರ್ಯಾರಿದ್ದಾರೆ ಗೊತ್ತೇ ಈ ಫಟಾಫಟ್ ಪಟ್ಟಿಯಲ್ಲಿ?

ಹೊಸದಿಲ್ಲಿ, ಎ.10: ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಯಸ್ಕಿಗೌಡ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ 131 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರುಗಳು ಎನ್ನಲಾದ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇಷ್ಟೇ ಅಲ್ಲದೆ ಈ ಪಟ್ಟಿಯಲ್ಲಿ ಎಐಸಿಸಿಯ ಸೀಲನ್ನು ಬಳಸಲಾಗಿತ್ತು.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಧುಯಸ್ಕಿ ಗೌಡ್, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನಕಲಿಯಾಗಿದ್ದು, ಎಐಸಿಸಿ ಸೀಲ್ ಬಳಸಿ ಈ ಪಟ್ಟಿ ತಯಾರಿಸಲಾಗಿದೆ. ಸ್ಕ್ರೀನಿಂಗ್ ಕಮಿಟಿ ಸಭೆ ಮಾತ್ರ ಮುಗಿದಿದ್ದು, ಇನ್ನೂ ಕೇಂದ್ರ ಚುನಾವಣಾ ಸಮಿತಿ ಸಭೆಯಾಗಬೇಕಿದೆ ಎಂದರು.
ಇದು ಬಿಜೆಪಿ ಐಟಿ ಸೆಲ್ ನ ಕೃತ್ಯವಾಗಿದ್ದು, ಬಿಜೆಪಿಯವರು ಇಂತಹ ನಕಲಿ ಪಟ್ಟಿ ತಯಾರಿಯಲ್ಲಿ ನಿಸ್ಸೀಮರು. ಸ್ಮೃತಿ ಇರಾನಿಯವರ ಹಾಗು ಪ್ರಧಾನಿ ಮೋದಿಯವರ ಸರ್ಟಿಫಿಕೇಟನ್ನು ಕೂಡ ಹೀಗೆ ತಯಾರಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವುದು ಎಂದಿದ್ದಾರೆ.
ಫಟಾಫಟ್ ಪಟ್ಟಿ: ರಾಜ್ಯದ ಹಲವು ಕಾಂಗ್ರೆಸ್ ನಾಯಕರ ಹೆಸರುಗಳು ಈ ಪಟ್ಟಿಯಲ್ಲಿವೆ. ಚಿತ್ತಾಪುರ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವ, ಹಾಲಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಈ ಪಟ್ಟಿಯಲ್ಲಿದೆ. ಖರ್ಗೆ ಸದ್ಯ ರಾಜ್ಯ ರಾಜಕಾರಣಕ್ಕೆ ಬರುವ ಯಾವುದೇ ಸೂಚನೆಯಿಲ್ಲ. ಅದರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎಂದು ಖುದ್ದು ರಾಹುಲ್ ಗಾಂಧಿಯೇ ಘೋಷಿಸಿರುವಾಗ ಖರ್ಗೆ ಮತ್ತೆ ವಿಧಾನಸಭೆಗೆ ಸ್ಪರ್ಧಿಸುವ ಸಾಧ್ಯತೆಯೇ ಇಲ್ಲ.
ಪಟ್ಟಿಯ ಕೊನೆಯಲ್ಲಿ ಅನಾರೋಗ್ಯಕ್ಕೊಳಗಾಗಿ ಕಳೆದ ಕೆಲವು ದಿನಗಳಿಂದ ದಿಲ್ಲಿಯಲ್ಲಿ ಆಸ್ಪತ್ರೆಯಲ್ಲಿರುವ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರ ಹೆಸರಿನಲ್ಲಿ ಸಹಿ ಇದೆ. ಆಸ್ಪತ್ರೆಯಲ್ಲಿದ್ದು ಹಲವು ದಿನಗಳಿಂದ ಯಾವುದೇ ಸಭೆಯಲ್ಲಿ ಭಾಗವಹಿಸದ ಆಸ್ಕರ್ ಅವರು ಈಗ ಇದ್ದಕ್ಕಿದ್ದಂತೆ ಸಹಿ ಮಾಡುವುದು ಹೇಗೆ..?
ಒಟ್ಟಿನಲ್ಲಿ ಈ ಪಟ್ಟಿಯನ್ನು ಗಮನಿಸುವಾಗ ಇಂತಹ ಕೃತ್ಯಗಳಲ್ಲಿ ನಿಪುಣರಾಗಿರುವ ಯಾರೋ ಈ ಕೃತ್ಯ ಎಸಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಇಷ್ಟೇ ಅಲ್ಲದೆ 131 ಕ್ಷೇತ್ರಗಳ ಹೆಸರು ಹಾಗು ಅಭ್ಯರ್ಥಿಗಳ ಹೆಸರನ್ನು ಪಟ್ಟಿ ಮಾಡುವುದಾಗಲೀ, ಎಐಸಿಸಿಯ ಸೀಲನ್ನು ಬಳಸುವುದಾಗಲೀ ಒಂದು ತಂಡದ ಕೃತ್ಯವೇ ಹೊರತು ಒಬ್ಬನಿಂದ ಸಾಧ್ಯವಿಲ್ಲ ಎನ್ನುವದಂತೂ ಸತ್ಯ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಕಲಿ ಪಟ್ಟಿ ಈ ಕೆಳಗಿದೆ












