ಪತ್ನಿಯ ಅಶ್ಲೀಲ ಫೋಟೋ ಹರಿಯಬಿಟ್ಟ ಗಂಡ: ದೂರು ದಾಖಲು
ಬೆಂಗಳೂರು, ಎ.10: ಕೌಟುಂಬಿಕ ಕಲಹದಿಂದಾಗಿ ಪತ್ನಿಯಿಂದ ದೂರವಾಗಿದ್ದ ವ್ಯಕ್ತಿಯೊಬ್ಬ ಪತ್ನಿಯ ಫೋಟೋವನ್ನು ಅಶ್ಲೀಲವಾಗಿ ವಿರೂಪಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಲ್ಲದೆ, ಪೊಲೀಸ್ ಪೇದೆಗಳೊಂದಿಗೆ ಹೆಂಡತಿಯ ಮನೆಗೇ ನುಗ್ಗಿ ದರೋಡೆ ನಡೆಸಿದ್ದಾನೆ ಎನ್ನುವ ದೂರು ದಾಖಲಾಗಿದೆ.
ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷ್ಣಮೂರ್ತಿ ಎಂಬಾತನ ವಿರುದ್ಧ ಆತನ ಪತ್ನಿಯೇ ದೂರು ನೀಡಿದ್ದು, ಜೊತೆಗೆ ಪೊಲೀಸ್ ಪೇದೆಗಳಾದ ಆನಂದ್ ಭಟ್ ಮತ್ತು ನಾಗಪತಿ ಎಂಬುವರ ವಿರುದ್ಧವೂ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ವಾಸವಾಗಿರುವ ಮಹಿಳೆಯ ಜೊತೆ ಕೌಟಂಬಿಕ ಕಾರಣದಿಂದ ಆಕೆಯ ಪತಿ ಜಗಳವಾಡಿಕೊಂಡು ದೂರವಾಗಿದ್ದ. ಇಬ್ಬರೂ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಹೆಂಡತಿಯ ಮೇಲಿನ ಸಿಟ್ಟಿಗೆ ಆಕೆಯ ಫೋಟೋಗಳನ್ನು ಫೊಟೋಶಾಪ್‌ನಲ್ಲಿ ಅಶ್ಲೀಲ ಫೋಟೋಗಳೊಂದಿಗೆ ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೃಷ್ಣಮೂರ್ತಿ ಹರಿಯಬಿಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪತ್ನಿಯ ನಡತೆ ಸರಿ ಇಲ್ಲ ಎಂದು ಬಿಂಬಿಸುವ ಉದ್ದೇಶದಿಂದ ಕೃಷ್ಣಮೂರ್ತಿ ಈ ಕೃತ್ಯವೆಸಗಿದ್ದಾನೆ. ಜೊತೆಗೆ ಕೆಂಗೇರಿ ಪೊಲೀಸ್ ಠಾಣೆಯ ಪೇದೆಗಳಾದ ಆನಂದ್ ಭಟ್ ಮತ್ತು ನಾಗಪತಿ ಎಂಬುವರೊಂದಿಗೆ ಪತ್ನಿಯ ಮನೆಗೇ ನುಗ್ಗಿ 60 ಸಾವಿರ ಹಣ ಮತ್ತು ಮೊಬೈಲ್ ದೋಚಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.







