ಸತ್ಯನಾರಾಯಣರಾವ್ ವಿರುದ್ಧ ಯಾವುದೆ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್ ಸೂಚನೆ
ಶಶಿಕಲಾಗೆ ಆತಿಥ್ಯ ನೀಡಲು 2 ಕೋಟಿ ಲಂಚ ಪಡೆದ ಆರೋಪ

ಬೆಂಗಳೂರು, ಎ.10: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ತಮಿಳುನಾಡಿನ ಶಶಿಕಲಾ ಅವರಿಗೆ ವಿವಿಐಪಿ ಟ್ರೀಟ್‌ಮೆಂಟ್ ನೀಡಲು ಎರಡು ಕೋಟಿ ರೂ.ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿಜಿಪಿ ಸತ್ಯನಾರಾಯಣರಾವ್ ವಿರುದ್ಧ ಮುಂದಿನ ವಿಚಾರಣೆವರೆಗೂ ಯಾವುದೇ ಕ್ರಮಕ್ಕೆ ಮುಂದಾಗದಂತೆ ಎಸಿಬಿಗೆ ಹೈಕೋರ್ಟ್ ಸೂಚಿಸಿದೆ.
ಈ ಸಂಬಂಧ ಎಸಿಬಿ ದಾಖಲಿಸಿರುವ ಎಫ್‌ಐಆರ್ ರದ್ದುಕೋರಿ ಸತ್ಯನಾರಾಯಣರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಎಸ್. ಚೌಹಾಣ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿತು.
ಸರಕಾರದ ಪರ ವಾದಿಸಿದ ವಕೀಲರು, ಸತ್ಯನಾರಾಯಣರಾವ್ ಅವರು ಸಲ್ಲಿಸಿರುವ ತಿದ್ದುಪಡಿ ತಕರಾರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯವು ಕಾಲಾವಕಾಶ ನೀಡಬೇಕೆಂದು ಕೋರಿದರು. ಹಾಗೆಯೇ ರಾವ್ ಅರ್ಜಿಗೆ ಎ.16ರೊಳಗೆ ಆಕ್ಷೇಪಣೆ ಸಲ್ಲಿಸಲಾಗುವುದು ಮತ್ತು ಮುಂದಿನ ವಿಚಾರಣೆವರೆಗೂ ಸರಕಾರ ಹಾಗೂ ಎಸಿಬಿಯು ರಾವ್‌ಗೆ ಯಾವುದೆ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದರು. ಅರ್ಜಿ ವಿಚಾರಣೆಯನ್ನು ಎ.19ಕ್ಕೆ ಮುಂದೂಡಲಾಯಿತು.





