ಪ್ರಜಾಪ್ರಭುತ್ವ ಅಪಾಯದಲ್ಲಿರುವಾಗ ನ್ಯಾಯಾಂಗ ಮತ್ತು ಮಾಧ್ಯಮ ಮಧ್ಯಪ್ರವೇಶಿಸಬೇಕು: ನ್ಯಾಯಾಧೀಶ ಕುರಿಯನ್

ಹೊಸದಿಲ್ಲಿ, ಎ.10: ನ್ಯಾಯಾಂಗ ಮತ್ತು ಮಾಧ್ಯಮ ಪ್ರಜಾಪ್ರಭುತ್ವದ ಎರಡು ಕಣ್ಗಾವಲುಗಳು. ಹಾಗಾಗಿ ಪ್ರಜಾಪ್ರಭುತ್ವ ಅಪಾಯದಲ್ಲಿರುವಾಗ ಈ ಎರಡು ಅಂಗಗಳು ತನ್ನ ಸಂಪೂರ್ಣ ಬಲದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಕುರಿಯನ್ ಜೋಸೆಫ್ ತಿಳಿಸಿದ್ದಾರೆ.
ಸೋಮವಾರದಂದು ದಿಲ್ಲಿಯಲ್ಲಿ ಕೇರಳ ಮಾಧ್ಯಮ ಅಕಾಡೆಮಿಯ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ನ್ಯಾಯಾಧೀಶರು, ನಿವೃತ್ತಿಯ ಬಳಿಕ ತಾನು ಯಾವುದೇ ಸರಕಾರಿ ಉದ್ಯೋಗದಲ್ಲಿ ಮುಂದುವರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಕುರಿಯನ್ ಅವರ ಸಹೋದ್ಯೋಗಿ ನ್ಯಾಯಾಧೀಶ ಜೆ. ಚೆಲಮೇಶ್ವರ್, ಕೆಲವು ದಿನಗಳ ಹಿಂದೆ ತಾನು ನಿವೃತ್ತಿಯ ನಂತರ ಯಾವುದೇ ಸರಕಾರಿ ಉದ್ಯೋಗವನ್ನು ಪಡೆಯಲು ಬಯಸುವುದಿಲ್ಲ ಎಂದು ನೀಡಿದ್ದು ನ್ಯಾಯಾಧೀಶ ಕುರಿಯನ್ ಕೂಡಾ ಇದೀಗ ಅದೇ ಮಾತನ್ನು ಆಡಿದ್ದಾರೆ.
ನ್ಯಾಯಾಧೀಶ ಚೆಲಮೇಶ್ವರ್ ಮತ್ತು ಕುರಿಯನ್ ಜೋಸೆಫ್ ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ನಾಲ್ವರು ನ್ಯಾಯಾಧೀಶರು ಕರೆದಿದ್ದ ಮಾಧ್ಯಮಗೋಷ್ಟಿಯ ಭಾಗವಾಗಿದ್ದರು. ದೇಶದ ಶ್ರೇಷ್ಟ ನ್ಯಾಯಾಲಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಹಿರಿಯ ನ್ಯಾಯಾಧೀಶರು ಈ ವೇಳೆ ದೂರಿಕೊಂಡಿದ್ದರು. ಸೋಮವಾರ ವಿದ್ಯಾರ್ಥಿಗಳ ಜೊತೆ ಸಂವಾದದ ವೇಳೆ ಕುರಿಯನ್ ನ್ಯಾಯಾಂಗ ಮತ್ತು ಮಾಧ್ಯಮದ ಹೆಚ್ಚುತ್ತಿರುವ ಪಾತ್ರದ ಬಗ್ಗೆ ಮಾತನಾಡಿದರು. ನ್ಯಾಯಾಂಗ ಮತ್ತು ಮಾಧ್ಯಮ ಪ್ರಜಾಪ್ರಭುತ್ವವನ್ನು ಕಾಯುವ ನಾಯಿಗಳಿದ್ದಂತೆ. ತನ್ನ ಮಾಲಕನಿಗೆ ಅಪಾಯ ಎದುರಾದಾಗ ಅದು ಬೊಗಳುತ್ತದೆ. ಆಮೂಲಕ ಮಾಲಕನನ್ನು ಎಚ್ಚರಗೊಳಿಸುತ್ತದೆ. ಅದು ಬೊಗಳಿದರೂ ಮಾಲಕ ಎಚ್ಚರಗೊಳ್ಳದಿದ್ದರೆ. ಅದು ಕಚ್ಚುತ್ತದೆ. ಬೊಗಳುವ ನಾಯಿ ಕಚ್ಚುವುದಿಲ್ಲ ಎಂಬ ಮಾತಿದೆ ಆದರೆ ಮಾಲಕ ಅಪಾಯದಲ್ಲಿರುವಾಗ ಅದು ಕಚ್ಚಲೇಬೇಕಾಗುತ್ತದೆ. ಆ ಮಾಲಕನೇ ಪ್ರಜಾಪ್ರಭುತ್ವ ಎಂದು ಕುರಿಯನ್ ಸೂಚ್ಯವಾಗಿ ತಿಳಿಸಿದ್ದಾರೆ.







