ಕಾವೇರಿ ನಿರ್ವಹಣೆ: ಕರಡು ಯೋಜನೆ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ನಿರ್ದೇಶ

ಹೊಸದಿಲ್ಲಿ,ಎ.10: ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿಗಳ ನಡುವೆ ಕಾವೇರಿ ನದಿನೀರನ್ನು ಹಂಚಿಕೆ ಮಾಡಿ ತಾನು ಫೆ.16ರಂದು ನೀಡಿದ್ದ ತೀರ್ಪಿನ ಅನುಷ್ಠಾನಕ್ಕಾಗಿ ಯೋಜನೆಯೊಂದನ್ನು ರೂಪಿಸುವಲ್ಲಿ ವೈಫಲ್ಯಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿತು.
ಈ ಕುರಿತು ಮೇ 3ರೊಳಗೆ ಕರಡು ಯೋಜನೆಯನ್ನು ತನಗೆ ಸಲ್ಲಿಸುವಂತೆ ಕೇಂದ್ರ ವನ್ನು ಆದೇಶಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರ ಪೀಠವು, ಅಂತಿಮ ಯೋಜನೆಗೆ ತಾನು ಸಮ್ಮತಿಯ ಮುದ್ರೆಯನ್ನು ಒತ್ತುವವರೆಗೆ ಜನರು ಶಾಂತಿಯನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವಂತೆ ತಮಿಳುನಾಡು ಮತ್ತು ಕರ್ನಾಟಕ ಸರಕಾರಗಳಿಗೆ ನಿರ್ದೇಶ ನೀಡಿತು.
ತೀರ್ಪಿಗೆ ಅನುಗುಣವಾಗಿ ರೂಪಿಸಬೇಕಿದ್ದ ಯೋಜನೆಯು ಮಾ.30ರವರೆಗೂ ಸಿದ್ಧಗೊಂಡಿಲ್ಲ ಎಂದು ತಮಿಳುನಾಡು ಪರ ಹಿರಿಯ ನ್ಯಾಯವಾದಿ ಶೇಖರ ನಾಫಡೆ ಅವರು ತಕರಾರು ಎತ್ತಿದರು. ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ರಾಜ್ಯವು ಸಲ್ಲಿಸಿರುವ ಅರ್ಜಿಯ ಮೇಲೆ ಅವರು ವಾದಿಸುತ್ತಿದ್ದರು.
ಸರಕಾರವು ಈವರೆಗೆ ನಾಲ್ಕೂ ರಾಜ್ಯಗಳಿಗೆ ನೋಟಿಸ್‌ಗಳನ್ನು ಕಳುಹಿಸಿ ಯೋಜನೆಯನ್ನು ರೂಪಿಸುವ ಕುರಿತು ಅವುಗಳ ಅಭಿಪ್ರಾಯಗಳನ್ನು ಕೋರಿದೆ ಎಂದು ಕೇಂದ್ರದ ಪರ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ರಾಜ್ಯಗಳು ಯಾವುದೇ ಪಾತ್ರಗಳನ್ನು ಹೊಂದಿಲ್ಲ. ಆ ಘಟ್ಟವು ಕಳೆದುಹೋಗಿದೆ ಎಂದು ಪೀಠವು ಹೇಳಿತು.
ಕಾವೇರಿ ನಿರ್ವಹಣೆ ಮಂಡಳಿಯನ್ನು ರಚಿಸುವಂತೆ ಕಾವೇರಿ ಜಲ ವಿವಾದ ನ್ಯಾಯಾಧಿಕರಣವು ನಿರ್ದೇಶ ನೀಡಿದೆ ಎಂದು ತಿಳಿಸಿದ ನಾಫಡೆ, ನೀರು ಬಿಡುಗಡೆಯಾಗದೇ ರಾಜ್ಯವು ಸಂಕಷ್ಟಕ್ಕೆ ಸಿಲುಕಿದೆ ಎಂದರು.
ಇದಕ್ಕೆ ಪೀಠವು, ನ್ಯಾಯಾಧಿಕರಣದ ಆದೇಶವು ಈಗ ನಮ್ಮ ಆದೇಶದೊಂದಿಗೆ ವಿಲೀನಗೊಂಡಿದೆ ಎಂದು ಉತ್ತರಿಸಿತು.
ಕೇಂದ್ರವನ್ನು ತರಾಟೆಗೆತ್ತಿಕೊಂಡ ಅದು, ಸುದೀರ್ಘ ಅವಧಿಗೆ ನಾವು ವಿಷಯದ ಮೆಲೆ ನಿಗಾ ಇಡಲು ಸಾಧ್ಯವಿಲ್ಲ. ಯೋಜನೆಯನ್ನು ನೀವು ಏಕೆ ರೂಪಿಸಿಲ್ಲ ಮತ್ತು ಏಕೆ ಆ ಬಗ್ಗೆ ನಿರ್ಧರಿಸಿಲ್ಲ ಎನ್ನುವುದು ನಮಗೆ ತಿಳಿದಿಲ್ಲ. ನೀವು ಮೊದಲು ಕರಡು ಯೋಜನೆಯನ್ನು ಸಲ್ಲಿಸಿ, ಅದರ ಜಾರಿಗೆ ನಾವು ನಿರ್ದೇಶಗಳನ್ನು ನೀಡುತ್ತೇವೆ ಎಂದು ವೇಣುಗೋಪಾಲ ಅವರನ್ನು ಉದ್ದೇಶಿಸಿ ಹೇಳಿತು.
ಕೇಂದ್ರವು ಈ ಹಿಂದೆ ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ, ನದಿನೀರಿನ ಹಂಚಿಕೆಗೆ ವಿಧಿವಿಧಾನಗಳನ್ನು ರೂಪಿಸಲು ಮೂರು ತಿಂಗಳ ಗಡುವು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿತ್ತು.







