ಹಳ್ಳಿಯ ಕಾರ್ಯಕ್ರಮಗಳಿಂದ ದೇಶ ವಿಕಾಸ: ಬಿ.ಎ.ಸನದಿ
ಪಂಚನಬೆಟ್ಟು ಉತ್ಸವ

ಉಡುಪಿ, ಎ.10: ಭಾಷೆ, ಶಿಕ್ಷಣ, ಸಂಸ್ಕೃತಿಯನ್ನು ಪ್ರೋತ್ಸಾಹಿಸಿ, ಬೆಳೆಸುವ ಕಾರ್ಯಕ್ರಮಗಳು ಹಳ್ಳಿಯಲ್ಲಿ ನಡೆಯಬೇಕು. ಇದರಿಂದ ದೇಶದ ವಿಕಾಸ ಸುಲಭವಾಗುತ್ತದೆ ಎಂದು ಕನ್ನಡದ ಖ್ಯಾತ ಕವಿ, ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿ.ಎ ಸನದಿ ಹೇಳಿದ್ದಾರೆ.
ಹಿರಿಯಡ್ಕ ಸಮೀಪದ ಪಂಚನಬೆಟ್ಟುವಿನಲ್ಲಿ ಪಂಚನಬೆಟ್ಟು ವಿದ್ಯಾವರ್ಧಕ ಸಂಘ ಮತ್ತು ಪ್ರೌಢಶಾಲೆ ಹಾಗೂ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಸಂಯುಕ್ತವಾಗಿ ಆಯೋಜಿಸಿದ್ದ ಪಂಚನಬೆಟ್ಟು ಸಾಂಸ್ಕೃತಿಕ ಉತ್ಸವದಲ್ಲಿ ಸಂಘದ ಅಧ್ಯಕ್ಷ ಬಿ. ಮೋಹನ್‌ದಾಸ ಶೆಟ್ಟಿ ಅವರ ಸಂಸ್ಮರಣಾ ಗ್ರಂಥ ಸಂಮೋಹನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಉಡುಪಿ ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಪಂಚನಬೆಟ್ಟು ದೊಡ್ಡ ಸಾಂಸ್ಕೃತಿಕ, ಶೈಕ್ಷಣಿಕ ಕೇಂದ್ರವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಶಿಕ್ಷಣ ತಜ್ಞ ಹಾಗೂ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್ ಅವರು ಮಾತನಾಡಿ, ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಸರ್ವತೋಮುಖ ವಿಕಾಸ ಕಾಣಲು ಸಾಧ್ಯ ಎಂದು.
ಸಿರಿಗನ್ನಡ ವೇದಿಕೆಯ ಕೇರಳ ಘಟಕದ ಅಧ್ಯಕ್ಷ ವಿ.ಬಿ.ಕುಳಮರ್ವ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬೊಮ್ಮರಬೆಟ್ಟು ಎ.ನರಸಿಂಹತಮ್ಮ ಅಭಿಪ್ರಾಯ ಹಂಚಿಕೊಂಡರು. ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಭುವನಪ್ರಸಾದ್ ಶೆಟ್ಟಿ, ಕವಯತ್ರಿ ಪೂರ್ಣಿಮಾ ಸುರೇಶ್, ಕಸಾಪ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ಕಸಾಪ ಪೆರ್ಡೂರು ಹೋಬಳಿ ಅಧ್ಯಕ್ಷ ಚಂದ್ರ ನಾಕ್ ಮತ್ತಿತರರು ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಬಸ್ ಕಂಡಕ್ಟರ್ ಮೊಹಮ್ಮದ್ ಹುಸೈನ್ ಆತ್ರಾಡಿ, ಯುವ ರಂಗಕರ್ಮಿ ಚೇತನ್ ನೀರೆ, ಯುವ ಚಿತ್ರ ಕಲಾವಿದ ದಿವಾಕರ ಸಾಣೆಕಲ್ಲು ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮೊಮ್ಮದ್ ಹುಸೈನ್ ಮಾತನಾಡಿದರು. ಬಳಿಕ ವಿವಿಧ ಗೋಷ್ಠಿಗಳು, ಮನೋರಂಜನಾ ಕಾರ್ಯಕ್ರಮಗಳು ನಡೆದವು. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಶೇಖರ ಅಜೆಕಾರು ಆಶಯ ನುಡಿಗಳನ್ನಾಡಿದರು.







