ಕುಂದಾಪುರ: ತಾಪಂ ಇಂಜಿನಿಯರ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

ಕುಂದಾಪುರ, ಎ.10: ನಿಗದಿತ ಆದಾಯ ಮೀರಿ ಆಸ್ತಿ, ಹಣ ಹೊಂದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕುಂದಾಪುರ ತಾಪಂನ ಜೂನಿಯರ್ ಇಂಜಿನಿಯರ್ (ಪ್ರಬಾರ ಎಇಇ) ರವಿಶಂಕರ್ ಅವರ ಕುಂದಾಪುರದ ನಾನಾಸಾಹೇನ್ ರಸ್ತೆಯಲ್ಲಿರುವ ಮನೆ, ತಾಪಂನ ಅವರ ಕಚೇರಿ ಹಾಗೂ ಹೊನ್ನಾವರದ ಮಾವನ ಮನೆಗಳ ಮೇಲೆ ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದೆ.
ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಶ್ರುತಿ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ ಇಂದು ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ್ದು, ದಾಳಿ ವೇಳೆ ರವಿಶಂಕರ್ ಅಲ್ಲದೇ ಅವರ ಮನೆಯವರ ಹೆಸರಲ್ಲಿರುವ ಆಸ್ತಿ ದಾಖಲೆಗಳು, ನಗದು, ಚಿನ್ನಾಭರಣಗಳ ಕುರಿತ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಮೂಲತ: ಕುಂದಾಪುರದವರೇ ಆಗಿರುವ ರವಿಶಂಕರ್ ಅವರು 1989ರಲ್ಲಿ ವೃತ್ತಿಜೀವನ ಆರಂಭಿಸಿದ ದಿನದಿಂದಲೂ ಕುಂದಾಪುರದಲ್ಲೇ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಗಳವಾರ ಬೆಳಗಿನಿಂದ ಸಂಜೆಯವರೆಗೆ ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿದ್ದು, ಈ ವೇಳೆ ಸ್ವಲ್ಪ ನಗದು ಹಾಗೂ ಚಿನ್ನಾಭರಣಗಳು ಸಿಕ್ಕಿವೆ. ಅವರ ಹೆಸರಲ್ಲಿರುವ ಸೈಟುಗಳು ಹಾಗೂ ಮನೆಯ ಕುರಿತು ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಒಂದು ಲಾಕರ್ ತಪಾಸಣೆ ಬಾಕಿಯಿದ್ದು, ಅದನ್ನು ಬುಧವಾರ ತೆರೆಯುವುದಾಗಿ ಎಸಿಬಿ ಎಸ್ಪಿ ಶ್ರುತಿ ತಿಳಿಸಿದ್ದಾರೆ.
ಎಸಿಬಿ ಡಿವೈಎಸ್‌ಪಿಗಳಾದ ಉಡುಪಿಯ ದಿನಕರ್ ಶೆಟ್ಟಿ, ಮಂಗಳೂರಿನ ಸುಧೀರ್ ಹೆಗ್ಡೆ, ಇನ್ಸ್‌ಪೆಕ್ಟರ್‌ಗಳಾದ ಜಯರಾಮ ಡಿ.ಗೌಡ, ಸತೀಶ್ ಕುಮಾರ್ ಹಾಗೂ ಸಿಬಂದಿ ದಾಳಿ ನಡೆಸಿದ ಎಸಿಬಿ ತಂಡದಲ್ಲಿದ್ದರು.







