ಮಲ್ಪೆ: ಎ.14ರಂದು ಭೀಮಾಯಾನ ಬೃಹತ್ ರ್ಯಾಲಿ
ಉಡುಪಿ, ಎ.10: ಸಂವಿಧಾನದ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 127ನೇ ಜನ್ಮದಿನಾಚರಣೆಯ ಪ್ರಯುಕ್ತ ಎ.14ರಂದು ಮಲ್ಪೆಯ ವಡಬಾಂಡೇಶ್ವರದಿಂದ ಬೃಹತ್ ಭೀಮಾಯಾನ ರ್ಯಾಲಿಯನ್ನು ಆಯೋಜಿಸಿ ರುವುದಾಗಿ ಅಂಬೇಡ್ಕರ್ ಯುವಸೇನೆಯ ಉಡುಪಿ ಘಟಕದ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಲ್ಪೆತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಹೊರಡುವ ಈ ಭೀಮಾಯಾನವನ್ನು ಬೆಂಗಳೂರಿನ ‘ನಾವೇ ಕರ್ನಾಟಕ’ ಅಧ್ಯಕ್ಷ ಪತ್ರಕರ್ತ ಪಾರ್ವತೀಶ ಬಿಳಿದಾಳೆ ಮತ್ತು ಹೈಕೋಟ್ ವಕೀಲ ಶಿವಮಣಿ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ಎಸ್.ಸುಂದರ್, ಗುರುಮಾಚಿ ಕ್ರೆಡಿಟ್ ಕೋ. ಅಪರೇಟಿವ್ ಸೊಸೈಟಿ ಅಧ್ಯಕ್ಷ ಆನಂದ ಮಡಿವಾಳ ಹಾಗೂ ಉಡುಪಿ ಬಿಟ್ಸ್ ವೆಬೆಸೈಟಿನ ಸಂಪಾದಕ ಶ್ರೀರಾಮ ದಿವಾಣ ಭಾಗವಹಿಸಲಿದ್ದಾರೆ.
ಸಂವಿಧಾನದ ರಕ್ಷಣೆಗಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಭೀಮಾಯಾನ ರ್ಯಾಲಿ ವಡಬಾಂಡೇಶ್ವರ ವೃತ್ತದಿಂದ ಹೊರಟು ಮಲ್ಪೆಯ ಹೃದಯ ಭಾಗವಾಗಿ ಕಡಲ ಕಿನಾರೆಯ ಕೊಳ ಮಾರ್ಗವಾಗಿ ತೊಟ್ಟಂ, ಬಡಾನಿಡಿಯೂರು, ಕದ್ಕೆ, ಗುಜ್ಜರಬೆಟ್ಟು, ಕೆಮ್ಮಣು, ನೇಜಾರು , ಕಲ್ಯಾಣಪುರ, ಸಂತೆಕಟ್ಟೆ, ಲಕ್ಮೀನಗರ, ಪಾಳೆಕಟ್ಟೆ, ಕೊಡವುರು, ಮೂಡುಬೆಟ್ಟು,ಕಂಬಳಕಟ್ಟ, ಪುತ್ತೂರು, ಬೈಪಾಸ್ ಮಾರ್ಗವಾಗಿ ಬನ್ನಂಜೆ, ಸಿಟಿಬಸ್ ನಿಲ್ದಾಣ, ಉಡುಪಿ ನಗರದ ಕೆ.ಎಂ.ಮಾರ್ಗವಾಗಿ ಜೋಡುಕಟ್ಟೆ ಮೂಲಕ ಕಪ್ಪೆಟ್ಟು, ಅಂಬಲಪಾಡಿಯಾಗಿ ಸಾಗಿ ಮಲ್ಪೆ ವಡಬಾಂಡೇಶ್ವರದಲ್ಲಿ ಸಮಾಪ್ತಿಗೊಳ್ಳಲಿದೆ.
ಈ ಭೀಮಾಯಾನ ರ್ಯಾಲಿಯ ಉದ್ದಕ್ಕೂ ದಲಿತ ಕಾಲನಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹೂವು ಹಾರಹಾಕಿ ಸ್ವಾಗತಿಸುವ ಸಂದರ್ಭದಲ್ಲಿ ಅಂಬೇಡ್ಕರ್‌ರ ಹುಟ್ಟು, ಹೋರಾಟ ಮತ್ತು ಸಂವಿಧಾನದ ರಕ್ಷಣೆಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ದಲಿತ ಮುಖಂಡರಾದ ಸುಂದರ್ ಗುಜ್ಜರ್‌ಬೆಟ್ಟು, ಸುಂದರ್ ಕಪ್ಪೆಟ್ಟು, ಗಣೇಶ್ ನೆರ್ಗಿ, ಸುರೇಶ್‌ಪಾಲ್ ತೊಟ್ಟಂ, ಸಂತೋಷ್ ಕಪ್ಪಟ್ಟು, ದೀಪಕ್ ಕೊಡವುರು, ಪ್ರಸಾದ್ ನೆರ್ಗಿ, ಮಂಜುನಾಥ ಕಪ್ಪೆಟ್ಟು ತಿಳಿಸಿದ್ದಾರೆ.







