ದಾವಣಗೆರೆ: ಮತಯಂತ್ರಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ದಾವಣಗೆರೆ,ಎ.10: ಪ್ರಸಕ್ತ ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ಬಳಸಲಾಗುತ್ತಿರುವ ಮತಯಂತ್ರಗಳು ವಿಶ್ವಾಸಾರ್ಹತೆಯಿಂದ ಕೂಡಿದ್ದು, ಯಾವುದೇ ಅನುಮಾನ-ಆತಂಕಗಳಿಲ್ಲದೇ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದರು.
ಜಿಲ್ಲಾ ಪ್ರಧಾನ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮತಯಂತ್ರಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮತಯಂತ್ರ, ಮತ ಖಾತ್ರಿ ಯಂತ್ರಗಳ ಬಗ್ಗೆ ಕುತೂಹಲ ಮತ್ತು ಅನುಮಾನಗಳಿಂದ ಪ್ರಶ್ನಿಸಿದ ವಕೀಲರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳಾಗಿವೆ. ಇದುವರೆಗೂ ಕಂಟ್ರೋಲ್ ಬ್ಯಾಲೆಟ್ ಯುನಿಟ್ ಇರುತ್ತಿತ್ತು. ಆದರೆ ನಾವು ಚಲಾಯಿಸಿದ ಮತ ಸರಿಯಾಗಿ ಚಲಾವಣೆ ಆಗಿದೆಯೇ ಎಂಬ ಗೊಂದಲ ಮನದಲ್ಲಿ ಮೂಡುತ್ತಿದ್ದುದು ಸಹಜ. ಹಾಗಾಗಿಯೇ ಇಂದು ಇವೆರಡು ಯಂತ್ರಗಳ ಜೊತೆ ವಿವಿಪ್ಯಾಟ್(ಮತ ಖಾತ್ರಿ ಯಂತ್ರ) ಬಂದಿದ್ದು ತಾವು ಚಲಾಯಿಸಿದ ಮತ ತಾವು ಬಯಸಿದ ಅಭ್ಯರ್ಥಿಗೆ ಚಲಾವಣೆ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳ ಬಹುದಾಗಿರುದರಿಂದ ಚುನಾವಣೆ ಬಗ್ಗೆ ವಿಶ್ವಾಸಾರ್ಹತೆ ಹೆಚ್ಚಲು ಸಹಕಾರಿಯಾಗಿದೆ ಎಂದರು.
ತಾವು ಮತ ಚಲಾಯಿಸಿದ ತಕ್ಷಣ ಪರದೆಯಲ್ಲಿ ಮೂಡಿಬರುವ ಅಭ್ಯರ್ಥಿಗಳ ಹೆಸರು, ಕ್ರಮಸಂಖ್ಯೆ, ಚುನಾವಣಾ ಚಿಹ್ನೆ ತಿಳಿಯುವುದರಿಂದ ಗೊಂದಲ ನಿವಾರಣೆ ಆಗಲಿದೆ ಎಂದರು.
ನಂತರ ಮತದಾನದ ದಿನ ಒಂದು ಗಂಟೆ ಮುಂಚೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಣುಕು ಮತದಾನ ಮಾಡಲಾಗುತ್ತದೆ. ಅವರಿಂದ ಒಪ್ಪಿಗೆ ಪಡೆದು ಮತದಾನ ಪ್ರಾರಂಭಿಸಲಾಗುತ್ತದೆ. ಸಂಪೂರ್ಣ ಬ್ಯಾಟರಿ ಅವಲಂಬಿತ ಯಂತ್ರಗಳು ಇವಾಗಿದ್ದು ವಿದ್ಯುತ್ ಅವಶ್ಯಕತೆ ಇರುವುದಿಲ್ಲ. ಒಂದು ಮತಯಂತ್ರದಲ್ಲಿ 1200 ಮತ ಹಾಕಲು ಅವಕಾಶವಿದೆ. ಮತದಾನದ ನಂತರ ಚಲಾವಣೆಯಾದ ಮತಗಳು ಹಾಗೂ ವಿವಿ ಪ್ಯಾಟ್‍ಗಳಲ್ಲಿ ಸಂಗ್ರಹಿತವಾದ ಚೀಟಿಗಳು ಕರಾರುವಕ್ಕಾಗಿವೆಯೇ ಎಂದು ಖಾತ್ರಿ ಪಡಿಸಲಾಗುತ್ತದೆ. ಜಿಲ್ಲೆಯಲ್ಲಿ 2 ಸಾವಿರ ಮತಗಟ್ಟೆಗಳು, 9 ಸಾವಿರ ಮತಯಂತ್ರಗಳ ಯುನಿಟ್ ಸಜ್ಜುಗೊಳಿಸಲಾಗಿದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಎಸ್. ಹೊಸಗೌಡರ್ ಮಾತನಾಡಿ, ಅತ್ಯಂತ ಆದರ್ಶ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಮತದಾನಕ್ಕೆ ಮಹತ್ವವಿದ್ದು ಎಲ್ಲರೂ ಮತದಾನ ಮಾಡಬೇಕು. ಮತದಾನದಿಂದ ಯಾರೂ ದೂರ ಉಳಿಯದಂತೆ ನೋಡಿಕೊಂಡು ಪವಿತ್ರ ಕರ್ತವ್ಯ ನಿರ್ವಹಿಸಬೇಕೆಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ ಮಾತನಾಡಿ, ಮತದಾನ ಮಾಡೋಣ ಪ್ರಜಾಪ್ರಭುತ್ವ ಗೆಲ್ಲಿಸೋಣ. ಮಾನ್ಯ ಸದಸ್ಯರೆಲ್ಲರೂ ಪ್ರಾತ್ಯಕ್ಷಿಕೆ ವೀಕ್ಷಿಸಿ ಯಾವುದೇ ಗೊಂದಲಗಳಿದ್ದರು ಪರಿಹರಿಸಿ ಮತದಾನದ ದಿನ ಮರೆಯದೇ ಮತ ಚಲಾಯಿಸಬೇಕೆಂದರು.
ಪಾಲಿಕೆ ಆಯುಕ್ತರಾದ ಇಸ್ಲಾವುದ್ದೀನ್ ಗದ್ಯಾಳ್, ನ್ಯಾಯಾಧೀಶರುಗಳಾದ 1ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎ. ಸದಲಗಿ, 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶರಾದ ನಾಗಶ್ರೀ, ಹಿರಿಯ ಸಿವಿಲ್ ಜಡ್ಜ್ ಸಾಬಪ್ಪ ವೇಮಗಲ್, ಕೌಟುಂಬಿಕ ನ್ಯಾಯಾಧೀಶರಾದ ಜಿನಾಳ್‍ಕರ್, ನ್ಯಾಯಾಧೀಶರಾದ ಸೋಮಶೇಕರ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಜಿಲ್ಲಾ ಸರ್ಕಾರಿ ವಕೀಲ ಸುರೇಶ್ ಇದ್ದರು.







