ಕಾವೇರಿ ವಿವಾದ: ಚೆನ್ನೈನಲ್ಲಿ ಐಪಿಎಲ್ ಪಂದ್ಯದ ವಿರುದ್ಧ ಪ್ರತಿಭಟನೆ, 350ಕ್ಕೂ ಹೆಚ್ಚು ಜನರ ಬಂಧನ

ಚೆನ್ನೈ,ಎ.10: ಚೆನ್ನೈನಲ್ಲಿ ಮಂಗಳವಾರ ಸಿಎಸ್‌ಕೆ-ಕೆಕೆಆರ್ ನಡುವಿನ ಐಪಿಎಲ್ ಪಂದ್ಯದ ವಿರುದ್ಧ ಟಿವಿಕೆ ಸೇರಿದಂತೆ ತಮಿಳುಪರ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, 350ಕ್ಕೂ ಅಧಿಕ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಎಂ.ಎ.ಚಿದಂಬರಂ ಸ್ಟೇಡಿಯಂ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರತಿಭಟನಾಕಾರರು ಸ್ಟೇಡಿಯಂ ಪ್ರವೇಶಿಸುವುದನ್ನು ತಡೆಯಲು ಕಮಾಂಡೋಗಳು ಮತ್ತು ಆರ್‌ಎ ಎಫ್ ಸೇರಿದಂತೆ 4,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕಾವೇರಿ ನಿರ್ವಹಣೆ ಮಂಡಳಿಯನ್ನು ರಚಿಸುವಲ್ಲಿ ಕೇಂದ್ರ ಸರಕಾರದ ನಿಷ್ಕ್ರಿಯತೆಯನ್ನು ಖಂಡಿಸಿ ಪಂದ್ಯವನ್ನು ಬಹಿಷ್ಕರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರು ಸ್ಟೇಡಿಯಂ ಸಮೀಪದ ಅಣ್ಣಾ ಸಲೈ ರಸ್ತೆಯನ್ನು ಆಕ್ರಮಿಸಿಕೊಂಡಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರವನ್ನೂ ನಡೆಸಿದರು. ಹಿರಿಯ ತಮಿಳು ಸಿನಿಮಾ ನಿರ್ದೇಶಕರಾದ ಭಾರತಿ ರಾಜಾ ಮತ್ತು ಸೀಮಾನ್ ಅವರೂ ಪ್ರತಿಭಟನಾಕಾರರೊಂದಿಗೆ ಸೇರಿದ್ದರು.
ತನ್ಮಧ್ಯೆ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರು ಚೆನ್ನೈನಲ್ಲಿ ಪಂದ್ಯಗಳಿಗೆ ಭದ್ರತೆ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ ಗಾಬಾ ಅವರನ್ನು ಭೇಟಿಯಾಗಿದ್ದರು. ಸೂಕ್ತ ವ್ಯವಸ್ಥೆಗಳನ್ನು ಮಾಡುವುದಾಗಿ ಗಾಬಾ ಅವರಿಗೆ ಭರವಸೆಯನ್ನು ನೀಡಿದ್ದಾರೆ.







