ಭಾರತ ಬಿಜೆಪಿ ನಿಯಂತ್ರಣಕ್ಕೆ ಬಂದರೆ ಅವರು ಸಂವಿಧಾನವನ್ನೇ ಬದಲಿಸುತ್ತಾರೆ: ದೊರೆಸ್ವಾಮಿ ಆತಂಕ

ಬೆಂಗಳೂರು, ಎ. 10: ಮುಂದಿನ (ಕರ್ನಾಟಕ ವಿಧಾನಸಭೆ) ಚುನಾವಣೆ ಭಯಾನಕವಾಗಿರಲಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ, ಮುಂದಿನ ವಿಧಾನಸಭೆ ಚುನಾವಣೆ ಸಹಿತ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದರು.
ಈ ಬಾರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಹಾನಿ ಉಂಟು ಮಾಡಲಿದ್ದಾರೆ. ಅವರ ಉದ್ದೇಶ ಕಾಂಗ್ರೆಸ್ ಅನ್ನು ಭಾರತದಿಂದ ನಿರ್ನಾಮ ಮಾಡುವುದು. ಯಾಕೆಂದರೆ ಕಳೆದ ಕೆಲವು ವರ್ಷಗಳಿಂದ ಇರುವ ಪಕ್ಷವೆಂದರೆ ಕಾಂಗ್ರೆಸ್ ಮಾತ್ರ ಹಾಗೂ ಅದು ಆಳವಾಗಿ ಬೇರೂರಿದೆ ಎಂದರು.
ಒಮ್ಮೆ ಕಾಂಗ್ರೆಸನ್ನು ದೇಶದಿಂದ ನಿರ್ನಾಮಗೊಳಿಸಿದರೆ, ಮೋದಿ ಹಾಗೂ ಶಾ ಇತರ ಪ್ರತಿಪಕ್ಷಗಳನ್ನು ಖರೀದಿಸಲಿದ್ದಾರೆ ಅಥವಾ ಪ್ರತಿಪಕ್ಷಗಳು ಬಿಜೆಪಿಯ ಮುಂದೆ ಶರಣಾಗತರಾಗಲಿವೆ ಎಂದು ದೊರೆಸ್ವಾಮಿ ಹೇಳಿದ್ದಾರೆ.
ಒಮ್ಮೆ ಇಡೀ ಭಾರತ ಬಿಜೆಪಿ ನಿಯಂತ್ರಣಕ್ಕೆ ಬಂದ ಅನಂತರ ಅವರು ಸಂವಿಧಾನವನ್ನು ಬದಲಾಯಿಸಲಿದ್ದಾರೆ. ಅವರು ಈಗಾಗಲೇ ಅದರ ಬಗ್ಗೆ ಚಿಂತಿಸುತ್ತಿದ್ದಾರೆ. ಅವರ ಉದ್ದೇಶ ಇರುವುದು ಭಾರತವನ್ನು ಹಿಂದೂ ರಾಜ್ಯವಾಗಿ ಪರಿವರ್ತಿಸುವುದು ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ಶಕ್ತಿಗಳು ಒಂದಾದರೆ ಮಾತ್ರ ಬಿಜೆಪಿಯನ್ನು ತಡೆದು ನಿಲ್ಲಿಸಬಹುದು. ಇದು ಮಾತ್ರ ಪ್ರಜಾಪ್ರಭುತ್ವ ರಕ್ಷಿಸಲು ಇರುವ ಒಂದು ದಾರಿ ಎಂದು ದೊರೆಸ್ವಾಮಿ ಹೇಳಿದ್ದಾರೆ.







