ರಾಜಕೀಯ ಭಯೋತ್ಪಾದನೆಯಿಂದ ದೇಶ ದುರ್ಬಲ: ಆನಂದ ಮಿತ್ತಬೈಲು
'ಎಸ್‌ಡಿಪಿಐ' ಚುನಾವಣಾ ಪೂರ್ವ ಕಾರ್ಯಕರ್ತರ ಸಭೆ

ಪುತ್ತೂರು, ಎ. 10: ರಾಜಕೀಯ ಭಯೋತ್ಪಾದನೆಯ ಮೂಲಕ ನರೇಂದ್ರ ಮೋದಿ ಹಾಗೂ ಅಮಿತ್ ಷಾ ದೇಶವನ್ನು ದುರ್ಬಲವಾಗುವಂತೆ ಮಾಡಿದ್ದಾರೆ ಎಂದು ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಆನಂದ ಮಿತ್ತಬೈಲು ಹೇಳಿದರು.
ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಪುತ್ತೂರು ವಿಧಾನಸಭಾ ಕ್ಷೇತ್ರದ ಆಶ್ರಯದಲ್ಲಿ ಮಂಗಳವಾರ ಸಂಜೆ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ನಡೆದ ಚುನಾವಣಾ ಪೂರ್ವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನರೇಂದ್ರ ಮೋದಿ ಹಾಗೂ ಅಮಿತ್ ಷಾ ರಾಜಕೀಯ ಭಯೋತ್ಪಾದಕರು. ಇವರು ವ್ಯವಸ್ಥಿತವಾಗಿ ರಾಜಕೀಯವನ್ನು ಭಯೋತ್ಪಾದನೆ ಹಾಗೂ ಕೋಮು ವಾದದ ಮೂಲಕ ನಡೆಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಡೆಸುತ್ತಿರುವ ಈ ರಾಜಕೀಯವನ್ನು ಎಸ್‌ಡಿಪಿಐ ಸವಾಲಾಗಿ ಸ್ವೀಕರಿಸಿ ಕೋಮುವಾದದ ವಿರುದ್ಧ ನಿರಂತರವಾಗಿ ರಾಜಕೀಯ ಸಂಘರ್ಷ ನಡೆಸಲು ಸಿದ್ಧವಾಗಿದೆ. ಮಹಿಳೆಯರ ಸಬಲೀಕರಣಕ್ಕಾಗಿ, ಶೋಷಿತರ ಶಕ್ತಿಗಾಗಿ ಎಸ್‌ಡಿಪಿಐಯನ್ನು ಗೆಲ್ಲಿಸಿ ತೋರಿಸಬೇಕಾಗಿದೆ. ಈ ಬಾರಿ ಬಿಜೆಪಿಯನ್ನು ಮಟ್ಟ ಹಾಕಿಯೇ ತೀರಬೇಕು. ಕಾಂಗ್ರೆಸ್‌ಗೂ ಪಾಠ ಕಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಶ್ರಮಿಸಬೇಕಾಗಿದೆ ಎಂದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಿಯಾರ್ ಫರಂಗಿಪೇಟೆ ಮಾತನಾಡಿ ರಾಜಕೀಯ ಲೆಕ್ಕಾಚಾರ ಸುಲಭದಲ್ಲಿ ಚುಕ್ತಾ ಆಗುವುದಿಲ್ಲ. ಈ ಹಿನ್ನಲೆಯಲ್ಲಿ ಉಳಿದ ಪಕ್ಷಗಳ ನಡೆಯನ್ನು ನೋಡಿಕೊಂಡು, ಎಸ್‌ಡಿಪಿಐ ಹೆಜ್ಜೆ ಇಡಲಿದೆ. ಈ ನಿಟ್ಟಿನಲ್ಲಿ ವೇದಿಕೆ ಸಿದ್ದಗೊಳಿಸುತ್ತಿದ್ದೇವೆ. 2ನೇ ಹಂತದಲ್ಲಿ ಪುತ್ತೂರು ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಾಗುವುದು ಎಸ್‌ಡಿಪಿಐ ನಡೆ ಕಾಂಗ್ರೆಸ್ ಪಕ್ಷಕ್ಕೂ ನಡುಕ ಹುಟ್ಟಿಸಿದೆ ಎಂದರು.
ಕೆಚ್ಚೆದೆಯ ಶಾಸಕರು ವಿಧಾನಸಭೆಯಲ್ಲಿ ಇರಬೇಕು ಎನ್ನುವುದೇ ಎಸ್‌ಡಿಪಿಐನ ಉದ್ದೇಶ. ಅಲ್ಪಸಂಖ್ಯಾತ, ಶೋಷಿತರ ಧ್ವನಿಯಾಗಿ, ಶಕ್ತಿಯಾಗಿ, ದಲಿತರ ರಕ್ಷಣೆಗಾಗಿ ಎಸ್‌ಡಿಪಿಐ ಅಧಿಕಾರಕ್ಕೆ ಬರಬೇಕು. ನೈಜ ಹೋರಾಟಗಾರರಿಂದ ಮಾತ್ರ ಇಂತಹ ಕೆಲಸ ಸಾಧ್ಯ. ಇಂತಹವರು ವಿಧಾನಸಭೆಗೆ ಪ್ರವೇಶಿಸ ಬೇಕು ಎಂಬ ನಿಟ್ಟಿನಲ್ಲಿ ಎಸ್‌ಡಿಪಿಐ ಶ್ರಮಿಸುತ್ತಿದೆ ಎಂದರು.
ಆರ್‌ಎಸ್‌ಎಸ್ ನಾಯಕರು ಕಾಂಗ್ರೆಸ್‌ಗೆ ಹೋಗುತ್ತಿದ್ದಾರೆ. ಇಂತಹ ನಾಯಕರಲ್ಲಿ ಶಕುಂತಳಾ ಶೆಟ್ಟಿ ಕೂಡ ಒಬ್ಬರು. ಇವರ ಜಾತ್ಯಾತೀತ ನಿಲುವಿನ ಬಗ್ಗೆಯೇ ಪ್ರಶ್ನೆ ಮೂಡುತ್ತಿದೆ. ಈಗಲೂ ಶಾಖೆಗೆ ಹೋಗುವ ಹೆಣ್ಮಗಳು ಇವರು. ತಮ್ಮ ಕರ್ತವ್ಯವನ್ನು ಮರೆತು, ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಅಧಿಕಾರ ಮಾತ್ರ ಬೇಕಾಗಿದೆ. ಜನಪರ ಕಾಳಜಿಯಿಲ್ಲ. ಇದಕ್ಕೆ ಪೂರ್ಣ ವಿರಾಮ ಹಾಕುವ ಅಗತ್ಯವಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್ ಮಾತನಾಡಿ, ಮುಸಲ್ಮಾನರಿಗೆ ಹಣದ ಕೊರತೆಯಿಲ್ಲ ಆದರೆ ನ್ಯಾಯದ ಕೊರತೆಯಿದೆ. ಕೇವಲ ಆಮಿಷ ಮಾತ್ರ ನೀಡುತ್ತಾರೆ. ಕಾಂಗ್ರೆಸ್‌ನ ಹತ್ತು ವರ್ಷದ ದುರಾಡಳಿತ ಕೊನೆಗಾಣಿಸಲು ಬಿಜೆಪಿಯನ್ನು ಜನ ಗೆಲ್ಲಿಸಿದರು. ಆದರೆ ಬಿಜೆಪಿ ಮಾಡಿರುವ ಕಾರ್ಯವೂ ಸರಿಯಿಲ್ಲ. ನೀರವ್ ಮೋದಿ, ಮಲ್ಯನಂತಹ ವ್ಯಕ್ತಿಗಳಿಂದ ದೇಶ ಲೂಟಿ ಮಾಡಿಸಲಾಗುತ್ತಿದೆ. ನಮಗೆ ಬೇಕಾಗಿರುವುದು ಸಮಾನತೆ, ನ್ಯಾಯ. ದೇಶದ ಐಕ್ಯತೆ, ಸಹೋದರತೆ, ಸ್ವಾತಂತ್ರ್ಯ ಉಳಿಸಲು ಎಸ್‌ಡಿಪಿಐಗೆ ಮತ ಹಾಕುವಂತೆ ಮನವಿ ಮಾಡಿಕೊಂಡರು.
ಎಸ್‌ಡಿಪಿಐ ಪುತ್ತೂರು ಘಟಕ ಪ್ರ. ಕಾರ್ಯದರ್ಶಿ ಅಬ್ದುಲ್ ಲತೀಫ್ ಮಾತನಾಡಿ, ಚುನಾವಣೆ ಬಂದಾಗ ಮಾತ್ರ ಅಲ್ಪಸಂಖ್ಯಾಕರ ನೆನಪಾಗುತ್ತದೆ. ಇದರ ಮೊದಲು ಅನ್ಯಾಯ, ದೌರ್ಜನ್ಯ ನಡೆದಾಗ ಅಲ್ಪಸಂಖ್ಯಾಕರ ನೆನಪೇ ಆಗುತ್ತಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಇಲ್ಲಿನ ಸಹೋದರತೆಯನ್ನು ಒಡೆಯುತ್ತಿದೆ ಎಂದು ಆರೋಪಿಸಿದರು.
ಎಸ್‌ಡಿಪಿಐ ಪುತ್ತೂರಿನ ಅಧ್ಯಕ್ಷ ಹಮೀದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ವಿಮೆನ್ಸ್ ಫ್ರಂಟ್ ಮೂಮೆಂಟ್‌ನ ಜಿಲ್ಲಾಧ್ಯಕ್ಷೆ ನಶ್ರಿಯಾ ಬೆಳ್ಳಾರೆ, ಎಸ್‌ಡಿಪಿಐ ಪುತ್ತೂರಿನ ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಸದಸ್ಯ ಸಂಶುದ್ದೀನ್ ಈಶ್ವರಮಂಗಲ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಝರೀನಾ ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.
ಸಭೆ ಆರಂಭಕ್ಕೆ ಮೊದಲು ದರ್ಬೆ ವೃತ್ತದಿಂದ ಟೌನ್ ಬ್ಯಾಂಕ್ ಹಾಲ್ ತನ ಮುಖ್ಯರಸ್ತೆಯಲ್ಲಿ ಪಾದಯಾತ್ರೆ ನಡೆಸಲಾಯಿತು.







