ಉನ್ನಾವೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಮುಖ್ಯಮಂತ್ರಿ ಆದಿತ್ಯನಾಥ್ ವಜಾಕ್ಕೆ ಕಾಂಗ್ರೆಸ್ ಆಗ್ರಹ

ಹೊಸದಿಲ್ಲಿ,ಎ.11: ಉನ್ನಾವೊ ಜಿಲ್ಲೆಯಲ್ಲಿ 18ರ ಹರೆಯದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಬುಧವಾರ ಆಗ್ರಹಿಸಿರುವ ಕಾಂಗ್ರೆಸ್, ರಾವಣನ ಆಡಳಿತವನ್ನು ನಡೆಸುತ್ತಿರುವ ಅವರ ಸರಕಾರವು ಮಹಿಳೆಯರನ್ನು ರಕ್ಷಿಸುವಲ್ಲಿ ವಿಫಲಗೊಂಡಿದೆ ಎಂದು ಹೇಳಿದೆ.
ಆದಿತ್ಯನಾಥ್ ಸರಕಾರವು ರಾವಣ ಸರಕಾರವಾಗಿದೆ. ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವರಿಗೆ ಯಾವುದೇ ಹಕ್ಕಿಲ್ಲ. ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ ಸುರ್ಜೆವಾಲಾ ಹೇಳಿದರು.
ಬಂಗರಮಾವು ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಮತ್ತು ಅವರ ಸೋದರರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ. ಆದಿತ್ಯನಾಥ್ ನಿವಾಸದ ಎದುರು ಆತ್ಮಾಹುತಿಗೆ ಯತ್ನಿಸಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ಆಕೆಯ ತಂದೆ ಮಂಗಳವಾರ ಜಿಲ್ಲಾ ಕಾರಾಗೃಹದಲ್ಲಿ ಸಾವನ್ನಪ್ಪಿದ್ದಾರೆ. ಸೆಂಗರ್ ಸೂಚನೆಯ ಮೇರೆಗೆ ತನ್ನ ತಂದೆಯನ್ನು ಜೈಲಿನಲ್ಲಿ ಕೊಲೆ ಮಾಡಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ.
ಮಾಜಿ ಬಿಜೆಪಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಮತ್ತು ಅಪಹರಣ ಪ್ರಕರಣವನ್ನು ಆದಿತ್ಯನಾಥ್ ಸರಕಾರವು ಹಿಂದೆಗೆದುಕೊಂಡಿರುವುದು ಆಘಾತಕಾರಿಯಾಗಿದೆ. ಇದು ಕ್ರಿಮಿನಲ್‌ಗಳಿಗೆ ಇನ್ನಷ್ಟು ಧೈರ್ಯ ನೀಡುತ್ತದೆ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳು ತೀವ್ರ ಏರಿಕೆಯಾಗಿರುವ ಈ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲದಂತಾಗುತ್ತದೆ ಎಂದು ಕಾಂಗ್ರೆಸ್ ಪ್ರತ್ಯೇಕ ಟ್ವೀಟ್‌ನಲ್ಲಿ ಟೀಕಿಸಿದೆ.
ಚಿನ್ಮಯಾನಂದರ ಆಶ್ರಮದಲ್ಲಿ ಹಲವಾರು ವರ್ಷಗಳನ್ನು ಕಳೆದಿದ್ದ ಯುವತಿಯೋರ್ವಳ ದೂರಿನ ಮೇರೆಗೆ 2011,ನ.30ರಂದು ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.







