ಶಿಕ್ಷೆಗೊಳಗಾದ ಕೈದಿಗಳ ವರ್ಗಾವಣೆಗೆ ಭಾರತ-ವಿಯೆಟ್ನಾಂ ಒಪ್ಪಂದ ಜಾರಿ

ಹೊಸದಿಲ್ಲಿ,ಎ.11: ಶಿಕ್ಷೆಗೊಳಗಾಗಿ ಪರಸ್ಪರರ ಜೈಲಿನಲ್ಲಿರುವ ಕೈದಿಗಳು ಬಾಕಿ ಶಿಕ್ಷೆಯನ್ನು ತಮ್ಮ ತಾಯ್ನಾಡಿನಲ್ಲಿಯೇ ಕಳೆಯಲು ಅವಕಾಶ ನೀಡುವ ಭಾರತ ಮತ್ತು ವಿಯೆಟ್ನಾಂ ನಡುವಿನ ಒಪ್ಪಂದವು ಅನುಷ್ಠಾನಕ್ಕೆ ಬಂದಿದೆ.
2013,ನ.1ರಂದು ಉಭಯ ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದು, 2014,ಜ.1ರಂದು ಭಾರತವು ಅದನ್ನು ಸ್ಥಿರೀಕರಿಸಿತ್ತು. ಆದರೆ ವಿಯೆಟ್ನಾಂ ಈ ಒಪ್ಪಂದವನ್ನು 2017,ಮಾ.10ರಂದಷ್ಟೇ ಸ್ಥಿರೀಕರಿಸಿದ್ದು, ಒಪ್ಪಂದದ ಜಾರಿಯ ಕುರಿತು ಗೃಹ ವ್ಯವಹಾರಗಳ ಸಚಿವಾಲಯವು ಕಳೆದ ವಾರ ಗೆಝೆಟ್ ಅಧಿಸೂಚನೆಯನ್ನು ಹೊರಡಿಸಿದೆ.
ಇನ್ನೊಂದು ರಾಷ್ಟ್ರದಲ್ಲಿ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಉಭಯ ರಾಷ್ಟ್ರಗಳ ಪ್ರಜೆಗಳು ಬಾಕಿಯುಳಿದಿರುವ ಶಿಕ್ಷೆಯನ್ನು ತಮ್ಮ ತಾಯ್ನಾಡಿನಲ್ಲಿ ಅನುಭವಿಸಲು ಈ ಒಪ್ಪಂದವು ಅವಕಾಶ ನೀಡುತ್ತದೆ ಮತ್ತು ತಮ್ಮ ಸ್ವಂತ ಸಮಾಜಗಳಲ್ಲಿ ಅವರ ಪುನರ್ವಸತಿಗೆ ಅನುಕೂಲಿಸುತ್ತದೆ ಎಂದು ಅಧಿಸೂಚನೆ ಯಲ್ಲಿ ಹೇಳಲಾಗಿದೆ.
ಒಪ್ಪಂದದ ವಿವಿಧ ಷರತ್ತುಗಳನ್ನು ಅಧಿಸೂಚನೆಯಲ್ಲಿ ವಿವರಿಸಲಾಗಿದೆ. ವ್ಯಕ್ತಿಯು ತನ್ನನ್ನು ಸ್ವೀಕರಿಸುವ ರಾಷ್ಟ್ರದ ಪ್ರಜೆಯಾಗಿರಬೇಕು ಮತ್ತು ವರ್ಗಾವಣೆಗೊಳಿಸುವ ರಾಷ್ಟ್ರದಲ್ಲಿ ಮರಣದಂಡನೆಗೆ ಗುರಿಯಾಗಿರಬಾರದು. ಪ್ರಕರಣದಲ್ಲಿ ಅಂತಿಮ ತೀರ್ಪಿನ ಬಳಿಕ ಆತ ಶಿಕ್ಷೆಯನ್ನು ಅನುಭವಿಸುತ್ತಿರಬೇಕು ಮತ್ತು ಆತನ ವಿರುದ್ಧ ಇತರ ಯಾವುದೇ ಕ್ರಿಮಿನಲ್ ಪ್ರಕರಣಗಳು ಇರಬಾರದು. ಅಲ್ಲದೆ ಆತ ಮಿಲಿಟರಿ ಕಾನೂನಿನಡಿ ಶಿಕ್ಷೆಗೆ ಗುರಿಯಾಗಿರಬಾರದು ಇತ್ಯಾದಿಗಳು ಈ ಷರತ್ತುಗಳಲ್ಲಿ ಸೇರಿವೆ.
ಕೈದಿಗಳ ಪುನರ್ವಸತಿ ಕಾಯ್ದೆಯು 2003ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಭಾರತವು ತಮ್ಮ ತಾಯ್ನಾಡುಗಳಿಗೆ ಕೈದಿಗಳ ವರ್ಗಾವಣೆಯ ಬಗ್ಗೆ ಹಲವಾರು ರಾಷ್ಟ್ರಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ.







