ಹನೂರು: ಶ್ರೀ ಮಹಿಷಾಸುರ ಮರ್ದಿನಿ ಅಮ್ಮನ ಜಾತ್ರಾ ಮಹೋತ್ಸವ

ಹನೂರು,ಎ.11: ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶ್ರೀ ಮಹಿಷಾಸುರ ಮರ್ದಿನಿ ಅಮ್ಮನವರ ಜಾತ್ರೆಯ ಅಂಗವಾಗಿ ಮೂರನೇ ದಿನವಾದ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ದೊಡ್ಡಬಾಯಿ ಬೀಗವನ್ನು ಹಾಕಿಸಿಕೊಂಡು ದೇವಿಯ ಮಹಿಮೆಯನ್ನು ಬಣ್ಣಿಸಿದರು.
ಹನೂರು ಪಟ್ಟಣದಲ್ಲಿ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಬಾಯಿಬೀಗ ಕಾರ್ಯಕ್ರಮ ತುಂಬಾ ಹೆಸರುವಾಸಿ ಪಡೆದಿದ್ದು, ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಹಿನ್ನಲೆಯಲ್ಲಿ ಕಳೆದ 15 ದಿನದ ಹಿಂದೆಯೇ ಬಾಯಿಬೀಗ ಹಾಕಿಸಿಕೊಳ್ಳಲು ಹರಕೆ ಹೊತ್ತಿದ್ದ ಭಕ್ತರು ಮಾಲೆಯನ್ನು ಧರಿಸಿ ದಿನನಿತ್ಯದ ಪೂಜೆಗಳಲ್ಲಿ ತೊಡಗಿದ್ದರು. ಬುಧವಾರ ಉಪವಾಸ ಕೈಗೊಂಡಿದ್ದು, ಇಂದು ಮಧ್ಯಾಹ್ನ ತಮಿಳುನಾಡಿನಿಂದ ಆಗಮಿಸಿದ ಅರ್ಚಕರಿಂದ ದೊಡ್ಡಬಾಯಿಬೀಗವನ್ನು ಹಾಕಿಸಿಕೊಂಡು ಭಕ್ತಿ ಪರಾಕಷ್ಟೆಯನ್ನು ಮೆರೆಯುವ ಮೂಲಕ ದೇವಿ ಕೃಪೆಗೆ ಪಾತ್ರರಾದರು.
ಅರ್ಚಕರು ಕಬ್ಬಿಣದ ಸಲಾಕೆಗಳಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಿದರು. ಬಳಿಕ ಹರಕೆ ಹೊತ್ತಿದ್ದ ಭಕ್ತರಿಗೆ ಕೋಳಿಯ ರಕ್ತವನ್ನು ಕೆನ್ನೆಗೆ ಇಟ್ಟು, ಅರಿಶಿನ ಮಿಶ್ರತ ನೀರನ್ನು ಮೈಮೇಲೆ ಸುರಿದು 20-25 ಅಡಿ ಉದ್ದದ ಸರಳಿನಿಂದ ಬಾಯಿಬೀಗವನ್ನು ಹಾಕಲಾಯಿತು. ಇದಕ್ಕೂ ಮುನ್ನಾ ಕಬ್ಬಿಣದ ಸಲಾಕೆಗಳಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗಿ ನಂತರ ಪೂಜೆ ಪುನಸ್ಕಾರಗಳನ್ನು ಕೈಗೂಂಡು ನಂತರ ವಾದ್ಯವೃಂದದ ಮುಖಾಂತರ ಬೆಟ್ಟಳ್ಳಿಮಾರಮ್ಮನ ಬೀದಿ, ಖಾಸಗಿ ಬಸ್ ನಿಲ್ಧಾಣದ ಮುಖ್ಯರಸ್ತೆ ಹಳೇ ಎಂಡಿಸಿಸಿ ರೋಡ್ ಮುಖಾಂತರ ದೇಗುಲದ ಅರ್ಚಕರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಾಯಿಬೀಗವನ್ನು ಕಳಚಲಾಯಿತು.







