ನಾನು ಗೆದ್ದರೆ ಅಕ್ರಮ ಮರಳು ದಂಧೆಗೆ ಅವಕಾಶ: ಮತದಾರರಿಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಅಭಯ

ಬೆಳಗಾವಿ, ಎ.11: ಚುನಾವಣೆಯಲ್ಲಿ ಗೆದ್ದರೆ ಭ್ರಷ್ಟಾಚಾರ, ಅಕ್ರಮ ನಿಯಂತ್ರಣ ಮಾಡುತ್ತೇನೆಂದು ಮತದಾರರಿಗೆ ಅಭ್ಯರ್ಥಿಗಳು ಭರವಸೆ ನೀಡುವುದು ಸಾಮಾನ್ಯ. ಆದರೆ, ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬ ನಾನೇನಾದರೂ ಗೆದ್ದರೆ ಅಕ್ರಮಕ್ಕೆ ಬೆಂಬಲ ನೀಡುತ್ತೇನೆ ಎಂದು ಬಹಿರಂಗವಾಗಿ ಘೋಷಿಸಿರುವುದು ಕುತೂಹಲ ಮೂಡಿಸಿದೆ.
ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾರುತಿ ಅಷ್ಟಗಿ, ಮತದಾರರಿಗೆ ಈ ಆಶ್ವಾಸನೆ ನೀಡಿದ್ದಾರೆ. ನನ್ನನ್ನು ಶಾಸಕರ ಚುನಾವಣೆಯಲ್ಲಿ ಗೆಲ್ಲಿಸಿದರೆ ದಿನದ ಇಪ್ಪತ್ನಾಲ್ಕು ಗಂಟೆ ಅಕ್ರಮ ಮರಳು ದಂಧೆಗೆ ಅವಕಾಶ ಮಾಡಿಕೊಡುತ್ತೇನೆ ಎಂದು ವಾಗ್ದಾನ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಓಟಿಗಾಗಿ ಘಟಪ್ರಭಾನದಿ ಒಡಲು ಬಗೆಯುವ ಅಕ್ರಮ ಮರಳು ದಂಧೆಕೋರರ ಬೆನ್ನಿಗೆ ನಿಲ್ಲುವುದಾಗಿ ಹೇಳಿರುವುದನ್ನು ಕ್ಷೇತ್ರದ ಮತದಾರರು ತೀವ್ರವಾಗಿ ಖಂಡಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾರುತಿ ಅಷ್ಟಗಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸತೀಶ ಜಾರಕಿಹೊಳಿ ಅವರ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.







