ಕಾಂಗ್ರೆಸ್ ಸೋಲು ಮೈಸೂರಿನಿಂದಲೇ ಆರಂಭ: ಯಡಿಯೂರಪ್ಪ
_0.jpg)
ಬೆಂಗಳೂರು, ಎ.11: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಬಗ್ಗೆ ಜನ ಬೇಸತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ತವರು ಕ್ಷೇತ್ರದಲ್ಲೆ ಸೋಲುವ ಭಯ ಕಾಡುತ್ತಿದೆ. ಹೀಗಾಗಿ, ಬೇರೆ ಕ್ಷೇತ್ರದಲ್ಲಿ ನಿಲ್ಲಲು ಮುಂದಾಗಿದ್ದಾರೆ. ಕಾಂಗ್ರೆಸ್ ಸೋಲು ಮೈಸೂರಿನಿಂದಲೇ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದರು.
ಬುಧವಾರ ನಗರದ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ವತಿಯಿಂದ ಆಯೋಜಿಸಿದ್ದ ಚುನಾವಣಾ ನೀತಿ ನಿರ್ವಹಣಾ ಸಮಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಪ್ರಧಾನಮಂತ್ರಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರದ ಸಚಿವರ ತಂಡವೇ ರಾಜ್ಯ ಪ್ರವಾಸ ಮಾಡಿದ್ದಾರೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಿನ ಒಂದು ತಿಂಗಳು ಕಾಲ ಮನೆ, ಮಠ ಮರೆತು ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕೆಂದು ಬಿಜೆಪಿ ಕಾರ್ಯಕರ್ತರಿಗೆ ಇಂದಿಲ್ಲಿ ಕರೆ ನೀಡಿದರು.
ಕಳೆದ ಏಳು ವರ್ಷಗಳ ಇತಿಹಾಸದಲ್ಲಿ ಕಲಾಪ ಮೊಟಕುಗೊಳಿಸಿರುವ ಉದಾಹರಣೆ ಇಲ್ಲ. ಆದರೆ, ರಾಹುಲ್ ಗಾಂಧಿ 23 ದಿನಗಳವರೆಗೆ ಕಲಾಪ ಮೊಟಕುಗೊಳಿಸಿದ್ದಾರೆ. ಅಲ್ಲದೆ, ಕಲಾಪ ನಡೆಯದೆ ರಾಹುಲ್ ಮತ್ತು ಸೋನಿಯಾ ಗಾಂಧಿ ಪ್ರವಾಸ ಮತ್ತು ತುಟ್ಟಿಭತ್ತೆ ಪಡೆದಿದ್ದಾರೆ. ಆದರೆ, ಬಿಜೆಪಿ ಸಂಸದರು ಮಾತ್ರ ವೇತನ ಪಡೆದಿಲ್ಲ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ್‌ರಾವ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಬಿ.ಎಲ್. ಸಂತೋಷ್, ಪಿ.ಸಿ.ಮೋಹನ್, ರವಿಕುಮಾರ್, ನಂದಕುಮಾರ್ ಉಪಸ್ಥಿತರಿದ್ದರು







