ದಲಿತರು, ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಮನಮೋಹನ್‌ಸಿಂಗ್ ಕಳವಳ

ಚಂಡೀಗಢ,ಎ.11: ದೇಶದಾದ್ಯಂತ ಅಲ್ಪಸಂಖ್ಯಾತರು ಹಾಗೂ ದಲಿತರ ವಿರುದ್ಧದ ದೌರ್ಜನ್ಯಗಳು ಹೆಚ್ಚುತ್ತಿದ್ದು, ಇಂತಹ ಘಟನೆಗಳನ್ನು ನಿಯಂತ್ರಿಸದೆ ಹೋದಲ್ಲಿ ಪ್ರಜಾಪ್ರಭುತ್ವಕ್ಕೆ ಭಾರೀ ಹಾನಿಯುಂಟಾಗಲಿದೆಯೆಂದು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಯಾವುದೇ ರೀತಿಯ ವಿಭಜನವಾದಿ ನೀತಿಗಳು ಹಾಗೂ ರಾಜಕೀಯವನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.
ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ನಡೆದ ಪ್ರಪ್ರಥಮ ಎಸ್.ಬಿ.ರಂಗ್ನೇಕರ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಜನತೆಯನ್ನು ವಿಭಜಿಸಲು ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
‘‘ಧರ್ಮ ಹಾಗೂ ಜಾತಿ, ಭಾಷೆ ಹಾಗೂ ಸಂಸ್ಕೃತಿಯ ಆಧಾರದಲ್ಲಿ ಭಾರತದ ಜನತೆಯನ್ನು ವಿಭಜಿಸಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಪ್ರಸ್ತುತ ನಾನು ತೀವ್ರ ಆತಂಕದಲ್ಲಿ ಮುಳುಗಿದ್ದೇನೆ.ಅಲ್ಪಸಂಖ್ಯಾತರು ಮತ್ತು ದಲಿತರ ವಿರುದ್ಧ ದೌರ್ಜನ್ಯಗಳು ಹೆಚ್ಚುತ್ತಿವೆ. ಒಂದು ವೇಳೆ ಅವುಗಳನ್ನು ಹತ್ತಿಕ್ಕದೇ ಹೋದಲ್ಲಿ, ಈ ಪ್ರವೃತ್ತಿಗಳು ನಮ್ಮ ಪ್ರಜಾಪ್ರಭುತ್ವಕ್ಕೆ ಹಾನಿಯುಂಟು ಮಾಡಲಿವೆ. ಜನತೆಯಾಗಿ ನಾವು ವಿಭಜನವಾದಿ ನೀತಿಗಳನ್ನು ಹಾಗೂ ರಾಜಕೀಯವನ್ನು ಬಲವಾಗಿ ತಿರಸ್ಕರಿಸಬೇಕಾಗಿದೆ’’ಯೆಂದವರು ಹೇಳಿದ್ದಾರೆ.
ದೇಶದ ಸ್ವಾತಂತ್ರವೆಂದರೆ, ಅದು ಕೇವಲ ಸರಕಾರಕ್ಕೆ ಸೀಮಿತವಲ್ಲವೆಂದು ಪ್ರತಿಪಾದಿಸಿದ ಮಾಜಿ ಪ್ರಧಾನಿ, ‘‘ ದೇಶದ ಸ್ವಾತಂತ್ರವೆಂದರೆ ಜನತೆಯ ಸ್ವಾತಂತ್ರವಾಗಿದೆ. ಸ್ವಾತಂತ್ರವು ಕೇವಲ ಪ್ರಭಾವಿಗಳು ಹಾಗೂ ಶ್ರೀಮಂತರಿಗೆ ಮೀಸಲಾಗಿರಬಾರದು, ಅದು ಪ್ರತಿಯೊಬ್ಬ ಭಾರತೀಯನ ಸ್ವಾತಂತ್ರವಾಗಿರಬೇಕು ಎಂದರು.
ಸ್ವಾತಂತ್ರದ 70ನೆ ವರ್ಷಾಚರಣೆಯಲ್ಲಿ ದೇಶದ ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸುವುದು ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರದ ಬಗ್ಗೆ ದೃಢವಾದ ಬದ್ಧತೆಯಿಲ್ಲದೆ ಹೋದಲ್ಲಿ, ಪ್ರಜಾಪ್ರಭುತ್ವವು ಉಳಿಯಲಾರದು ಎಂದು ಮನಮೋಹನ್‌ಸಿಂಗ್ ಅಭಿಪ್ರಾಯಿಸಿದರು. ಸ್ವರಾಜ್ಯ (ಸ್ವಯಾಮಡಳಿತ)ಕ್ಕಿಂತ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಒಳಿತೆಂದು ರಾಷ್ಟ್ರಪಿತ ಮಹಾತ್ಮಗಾಂಧಿಯವರ ಮುಂದೆ ಸಾಮ್ರಾಜ್ಯಶಾಹಿ ಶಕ್ತಿಗಳು ವಾದಿಸಿದ್ದವು. ಆದರೆ ದೇಶದ ಜನತೆಯು ವಸಾಹತುಶಾಹಿ ಶಕ್ತಿಗಳು ಈ ಚಿಂತನೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರೆಂದು ಮನಮೋಹನ್‌ಸಿಂಗ್ ತಿಳಿಸಿದರು.
ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ಬಗ್ಗೆ ಬಲವಾದ ಗಮನಹರಿಸಬೇಕಾದ ಅಗತ್ಯವಿದೆಯೆಂದು ಖ್ಯಾತ ಅರ್ಥಶಾಸ್ತ್ರಜ್ಞರೂ ಆದ ಮನಮೋಹನ್‌ಸಿಂಗ್ ಅಭಿಪ್ರಾಯಿಸಿದರು.
‘‘ಸಮಾನತೆಯ ಪರವಾದ ನೀತಿಗಳ ಜಾರಿಯಿಂದ ಅಲ್ಪಾವಧಿಯಲ್ಲಿ ಬೆಳವಣಿಗೆಯ ಮೇಲೆ ದುಬಾರಿ ಪರಿಣಾಮವುಂಟಾಗಬಹುದು. ಆದರೆ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯು ದೀರ್ಘಾವಧಿಗೆ ದೇಶದ ಆರ್ಥಿಕತೆಯ ಕ್ಷೇಮಕ್ಕೆ ಹಾಗೂ ಸುಸ್ಥಿರ ಬೆಳವಣಿಗೆಗೆ ಹಾನಿಯುಂಟು ಮಾಡಲಿದೆ’’ ಎಂದು ಮನಮೋಹನ್ ಹೇಳಿದರು.







