ಹೊಸಂಗಡಿ, ಅಂಜಾರು ಚೆಕ್‌ಪೋಸ್ಟ್‌ನಲ್ಲಿ ದಾಖಲೆಗಳಿಲ್ಲದ 1.63ಲಕ್ಷ ರೂ. ನಗದು ವಶ
ಉಡುಪಿ, ಎ.11: ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿ ಹಾಗೂ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜಾರು ಚೆಕ್‌ಪೋಸ್ಟ್‌ನಲ್ಲಿ ಇಂದು ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ಒಟ್ಟು 1.63 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಅಧಿಕಾರಿಗಳ ತಂಡ ಹೊಸಂಗಡಿ ಚೆಕ್‌ಪೋಸ್ಟ್‌ನಲ್ಲಿ ಮಧ್ಯಾಹ್ನ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಯಡಮೊಗ್ಗೆಯ ವಿಶ್ವನಾಥ್ ನಾಕ್ ಎಂಬವರ ಪಿಕ್ ಅಪ್ ವಾಹನದಲ್ಲಿ ಯಾವುದೇ ದಾಖಲೆಗಳಿದ್ದ 1,05,790ರೂ. ನಗದು ಪತ್ತೆಯಾಗಿದೆ.
ವಿಶ್ವನಾಥ್ ನಾಕ್ ಮೀನಿನ ವ್ಯಾಪಾರಕ್ಕೆ ಸಂಬಂಧಿಸಿದ ಹಣವನ್ನು ಸಂಗ್ರಹಿಸಿ ತನ್ನ ಮಾಲಕರಿಗೆ ಒಪ್ಪಿಸಲು ತೆಗೆದುಕೊಂಡು ಹೋಗುತ್ತಿದ್ದರೆನ್ನಲಾಗಿದೆ. ಅದೇ ರೀತಿ ಸಂಜೆ 5ಗಂಟೆ ಸುಮಾರಿಗೆ ಅಂಜಾರು ಚೆಕ್‌ಪೊಸ್ಟ್‌ನಲ್ಲಿ ಮುರ್ಡೆಶ್ವರದ ಗಜೇಂದ್ರ ಶೆಟ್ಟಿ ಎಂಬವರ ಕಾರಿನಲ್ಲಿ ಪತ್ತೆಯಾದ ಯಾವುದೇ ದಾಖಲೆಗಳಿಲ್ಲದ 58,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಬಟ್ಟೆ ಖರೀದಿಸಲು ಈ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರೆನ್ನಲಾಗಿದೆ.
ಇದೀಗ ಈ ಹಣವನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಸಿಇಒ ನೇತೃತ್ವದ ಜಿಲ್ಲಾ ಮಟ್ಟದ ಚುನಾವಣಾ ಸಮಿತಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಸಂಬಂಧಪಟ್ಟವರು ಈ ನಗದಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ವಶಪಡಿಸಿಕೊಂಡಿರುವ ಹಣವನ್ನು ಹಿಂದಿರುಗಿಸಲಾಗುವುದು ಎಂದು ಉಡುಪಿ ಅರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದ್ದಾರೆ.





