ಬೆಂಗಳೂರು: ಎ.14 ರಿಂದ ಹೋಮಿಯೋಪತಿ ಅಂತಾರಾಷ್ಟ್ರೀಯ ಸಮಾವೇಶ
ಬೆಂಗಳೂರು, ಎ.11: ಸೆಂಟರ್ ಫಾರ್ ಕ್ಲಾಸಿಕಲ್ ಹೋಮಿಯೋಪತಿ ವತಿಯಿಂದ ಎ.14 ಮತ್ತು 15ರಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ‘ಹೋಮಿಯೋಪತಿ ವೈಜ್ಞಾನಿಕ ಅಂತಾರಾಷ್ಟ್ರೀಯ ಸಮಾವೇಶ’ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೆಂಟರ್ ಫಾರ್ ಕ್ಲಾಸಿಕಲ್ ಹೋಮಿಯೋಪತಿ ಕೇಂದ್ರದ ನಿರ್ದೇಶಕ ಡಾ.ಮಹೇಶ್, ನೊಬೆಲ್ ಪುರಸ್ಕೃತರಾದ ಹಾಗೂ ಹೋಮಿಯೋಪತಿ ಕ್ಷೇತ್ರದಲ್ಲಿ ಜೀವಂತ ದಂತಕಥೆಯಾಗಿರುವ ಪ್ರೊ.ಜಾರ್ಜ್ ವಿಥೋಲ್ಕಸ್ ಅವರು ಹೋಮಿಯೋಪತಿ ಕ್ಷೇತ್ರದಲ್ಲಿ 50 ವರ್ಷಗಳನ್ನು ಪೂರೈಸಿರುವ ಸ್ಮರಣಾರ್ಥ ಸಮಾವೇಶ ಆಯೋಜಿಸಲಾಗಿದೆ. ಅವರು ತಮ್ಮ 55 ವರ್ಷಗಳ ಸೇವೆಯಲ್ಲಿ ಸುಮಾರು 3.50 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಸುಮಾರು 75 ದೇಶಗಳಲ್ಲಿ ಅವರ ಲರ್ನಿಂಗ್ ಪ್ರೋಗ್ರಾಂ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯ ಚಿಂತಕರಾಗಿರುವ ವಿಥೋಲ್ಕಸ್ ಸಮಾವೇಶದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಎಲ್ಲರೊಂದಿಗೆ ಸಂವಾದ ನಡೆಸಲಿದ್ದಾರೆ. ಇದು ಹೋಮಿಯೋಪತಿ ಕ್ಷೇತ್ರದಲ್ಲಿ ಮಹತ್ವದ ಘಟ್ಟ. ಸಮಾವೇಶದಲ್ಲಿ ಸ್ವಿಜ್ಜರ್ಲೆಂಡ್, ರಷ್ಯಾ, ಗ್ರೀಸ್, ಭಾರತ ಸೇರಿದಂತೆ ವಿವಿಧ ಭಾಗಗಳ ಗಣ್ಯರು ಉಪನ್ಯಾಸ ನೀಡಲಿದ್ದಾರೆ. ಭಾರತ ಹಾಗೂ ಆಗ್ನೇಯ ಏಷ್ಯಾದಿಂದ ಸುಮಾರು 1500ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಸಮಾವೇಶವನ್ನು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಛಾನ್ಸಲರ್ ಡಾ.ಎಚ್.ಎನ್.ನಾಗೇಂದ್ರ ಉದ್ಘಾಟಿಸಲಿದ್ದಾರೆ. ಕರ್ನಾಟಕ ಹೋಮಿಯೋಪತಿ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್, ಪದ್ಮಶ್ರೀ ಡಾ.ಎಚ್.ಸುದರ್ಶನ್, ಪ್ರೊ.ಜಾರ್ಜ್ ವಿಥೋಲ್ಕಸ್‌ರವರ ಸಹಾಯಕಿ ಡಾ.ಮಾರಿಯಾ ಖೊರಿಯಾನೊಪೊಲೊ, ವೋರಿಯನ್ ಡಿಸ್ಟಲರೀಸ್‌ನ ಎಚ್.ಎನ್.ರಾಘವೇಂದ್ರ ಇನ್ನಿತರರು ಭಾಗವಹಿಸುತ್ತಿದ್ದಾರೆ. ಆಸಕ್ತರು ಮೊ.9845520477, 9449084747 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಹೋಮಿಯೋಪತಿ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್, ಡಾ.ಸೀಮಾ ಉಪಸ್ಥಿತರಿದ್ದರು.







