ಪುತ್ತೂರು: ಜಮೀಯ್ಯತ್ತುಲ್ ಫಲಾಹ್‌ನಿಂದ ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮ

ಪುತ್ತೂರು, ಎ. 11: ಜಮೀಯ್ಯತ್ತುಲ್ ಫಲಾಹ್ ಪುತ್ತೂರು ಘಟಕ ಹಾಗೂ ಮಂಗಳೂರು ನಗರ ಘಟಕ ಇದರ ಜಂಟಿ ಆಶ್ರಯದಲ್ಲಿ ಪುತ್ತೂರು ಬದ್ರಿಯಾ ಮಸೀದಿ ಸಭಾಂಗಣದಲ್ಲಿ ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮವನ್ನು ಜಮೀಯ್ಯತ್ತುಲ್ ಫಲಾಹ್ ಪುತ್ತೂರು ಘಟಕದ ಅಧ್ಯಕ್ಷ ನ್ಯಾಯವಾದಿ ಫಝ್ಲಲ್ ರಹಿಮಾನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಮಾಜ ಹಾಗೂ ಬಡವರ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಜಮೀಯ್ಯತ್ತುಲ್ ಫಲಾಹ್ ಘಟಕದ ವತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಪೂರ್ಣ ಬೆಂಬಲ ವ್ಯಕ್ತವಾಗಿದೆ. ನೂರಕ್ಕೂ ಮಿಕ್ಕಿ ಮಕ್ಕಳನ್ನು ಘಟಕದ ವತಿಯಿಂದ ಸುನ್ನತ್ ಕಾರ್ಯ ನೆರವೇರಿಸಲಾಗಿದೆ. ಸಂಸ್ಥೆಯು ಉತ್ತಮ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದು ಹೇಳಿದರು.
ಪುತ್ತೂರು ಬದ್ರಿಯಾ ಮಸೀದಿ ಖತೀಬ್ ಎಸ್. ಬಿ ಮಹಮ್ಮದ್ ದಾರಿಮಿ ಮಾತನಾಡಿ ಸುನ್ನತ್ ಕಾರ್ಯಕ್ಕೆ ಇಸ್ಲಾಮಿನಲ್ಲಿ ಮಹತ್ತರವಾದ ಸ್ಥಾನವಿದೆ. ಆರೋಗ್ಯದ ದೃಷ್ಟಿಯಿಂದ ಈಗ ಎಲ್ಲಾ ಧರ್ಮಿಯರೂ ಸುನ್ನತ್ ಕಾರ್ಯವನ್ನು ನಡೆಸುತ್ತಾರೆ. ವೈಜ್ಞಾನಿಕವಾಗಿಯೂ ಇದಕ್ಕೆ ಮಹತ್ವವಿದೆ ಎಂದು ಹೇಳಿದರು.ಜಮಾತ್ ಕಮಿಟಿ ಅಧ್ಯಕ್ಷ ಯು ಅಬ್ದುಲ್ಲ ಹಾಜಿ, ಮಂಗಳೂರು ನಗರ ಜಮೀಯ್ಯತುಲ್ ಫಲಾಹ್ ಘಟಕದ ಇಮ್ತಿಯಾರ್ ಖತೀಬ್, ರಶೀದ್ ದಾರಿಮಿ, ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿ ಪತ್ರಕರ್ತ ಶೇಖ್ ಜೈನುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.







