ಬಿಜೆಪಿಯನ್ನು ಪ್ರಶ್ನಿಸಿದರೆ ಅಭಿವ್ಯಕ್ತಿ ಸ್ವಾತಂತ್ರ ದಮನ: ಎನ್.ಹನುಮೇಗೌಡ
ಬೆಂಗಳೂರು, ಎ.11:ಭಾರತೀಯ ಜನತಾ ಪಕ್ಷದ ಅಥವಾ ಸಂಘಪರಿವಾರದವರನ್ನು ಪ್ರಶ್ನೆ ಮಾಡಿದರೆ ಅಭಿವ್ಯಕ್ತಿ ಸ್ವಾತಂತ್ರವನ್ನು ದಮನ ಮಾಡಲು ಮುಂದಾಗುತ್ತಿದ್ದಾರೆ ಎಂದು ಜನಸಂಘದ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಡೆಯುತ್ತಿರುವ ಅಕ್ರಮ, ಅನಾಚಾರವನ್ನು ಪ್ರಶ್ನೆ ಮಾಡಿದೆ ಎಂಬ ಕಾರಣಕ್ಕೆ ರಾಜ್ಯ ಬಿಜೆಪಿಯು ನನ್ನ ಮೇಲೆ ಎರಡು ಬಾರಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಆದರೆ, ನೈಜ ದಾಖಲೆಯಿಲ್ಲದೆ ನ್ಯಾಯಾಲಯ ಪ್ರಕರಣವನ್ನು ವಜಾ ಮಾಡಿದ್ದರೂ, ಮತ್ತೊಂದು ಮೂಲದಿಂದ ಕೇಸ್ ದಾಖಲಿಸಿದ್ದಾರೆ ಎಂದು ದೂರಿದರು.
ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಲಾಗಿದೆ ಹಾಗೂ ಜನಸಂಘದ ವಾರಸುದಾರರು ಎಂದು ಭಾಷಣ ಮಾಡುವ ಬಿಜೆಪಿಯು ಸಂವಿಧಾನದ ಮೂಲಭೂತ ಹಕ್ಕುಗಳನ್ನು ದಮನ ಮಾಡಲು ಪ್ರಯತ್ನ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರದ ಮಂತ್ರಿ ಸಂವಿಧಾನದ ಬದಲಾವಣೆಗಾಗಿ ಅಧಿಕಾರಕ್ಕೆ ಬಂದಿದ್ದೇವೆ ಎಂದಿದ್ದರು. ಸಂವಿಧಾನದ ವಿರುದ್ಧವಾಗಿ ಹಣ, ಜಾತಿ, ಧರ್ಮದ ಬಲದಿಂದ ಅಧಿಕಾರಕ್ಕೆ ಬಂದು ನನ್ನ ವಿರುದ್ಧ ಇಲ್ಲಸಲ್ಲದ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ ಎಂದರು.
2014 ಮೇ 15 ರಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿದೆ ಎಂದು ಸುಳ್ಳು ಪ್ರಮಾಣ ಪತ್ರದ ಮೂಲಕ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಇದು ಬಿಜೆಪಿ ಮತ್ತು ಪದಾಧಿಕಾರಿಗಳ ಬೇಜವಾಬ್ದಾರಿತನ. ಇಂತಹ ಬೇಜವಾಬ್ದಾರಿ ವ್ಯಕ್ತಿಗಳು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದರೆ ರಾಜ್ಯದ ಅಭಿವೃದ್ಧಿ ಅಸಾಧ್ಯ ಎಂದು ನುಡಿದರು.
ಒಂದು ಪ್ರಕಟಣೆಯಲ್ಲಿ ಬಿಜೆಪಿ ನಾಯಕರ ಭಾವಚಿತ್ರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ಸುಳ್ಳಿನ ಮೊಕದ್ದಮೆ ದಾಖಲಿಸಿದ್ದಾರೆ. ಇದು ದುರುದ್ದೇಶದಿಂದ ನನಗೆ ತೊಂದರೆ ಕೊಡುವ ಸಲುವಾಗಿ ಮಾಡಿದ ಪಿತೂರಿ. ಪತ್ರಿಕೆಯಲ್ಲಿ ಪ್ರಕಟಿಸಿರುವುದು ಪಕ್ಷದ ಕಾರ್ಯಕರ್ತರು ಓದಿ ಆಸಕ್ತಿ ಕಳೆದುಕೊಳ್ಳುತ್ತಾರೆ ಎಂದು ಕೇಸ್ ದಾಖಲಿಸುವುದು ನೋಡಿದರೆ ಬಿಜೆಪಿ ಕಾರ್ಯಕರ್ತರು ದಡ್ಡರು ಅಥವಾ ಅಜ್ಞಾನಿ ಅವಿವೇಕಿಗಳು ಎಂದು ಪಕ್ಷದ ನಾಯಕರೆ ಒಪ್ಪಿಕೊಂಡಂತಾಗಿದೆ ಎಂದು ಟೀಕಿಸಿದರು.
ಭ್ರಷ್ಟರೇ ತುಂಬಿಕೊಂಡಿದ್ದಾರೆ: ರಾಜ್ಯದಲ್ಲಿನ ಬಿಜೆಪಿ ಪಕ್ಷದಲ್ಲಿ ಬಹುತೇಕ ಭ್ರಷ್ಟರು, ಕಳ್ಳರು, ಲೂಟಿಕೋರರು ತುಂಬಿಕೊಂಡಿದ್ದಾರೆ. ಅಲ್ಲದೆ, ಇವರೆಲ್ಲರನ್ನೂ ಬಿಜೆಪಿ ಪಕ್ಷ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಒಟ್ಟಾರೆಯಾಗಿ ಬಿಜೆಪಿಯನ್ನು ಪ್ರಶ್ನೆ ಮಾಡಿದರೆ ಅವರನ್ನು ತುಳಿಯುವ, ನಾಶ ಮಾಡುವ ಪ್ರಯತ್ನ ವ್ಯಾಪಕವಾಗಿ ನಡೆಯುತ್ತಿದೆ. ಸಂಘಟನೆಗಾಗಿ ಶ್ರಮ ವಹಿಸಿದ ಸಾವಿರಾರು ಮಾಜಿ ಪ್ರಚಾರಕರು, ಸ್ವಯಂ ಸೇವಕರು ನನ್ನಂತೆ ಪ್ರಶ್ನಿಸಿದ ಕಾರಣಕ್ಕೆ ಸಂಘ ಪರಿವಾರ, ಬಿಜೆಪಿಯು ಉಪಯೋಗಿಸಿ ಬಿಸಾಡಿದೆ. ಅಲ್ಲದೆ, ಅವರಿಗೆ ತೊಂದರೆ ಕೊಟ್ಟು ನೋವಿನಲ್ಲಿ ನರಳುವಂತೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ವಿರುದ್ಧವಾಗಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನಸಂಘ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ’
-ಎನ್.ಹನುಮೇಗೌಡ, ಜನಸಂಘ ಮುಖಂಡ







